ಸಿದ್ಧಕಟ್ಟೆ: ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಬಡ ಮಹಿಳೆಯೊಬ್ಬರ ಕುಟುಂಬಕ್ಕೆ ವಾಸಿಸಲು ಸೂಕ್ತವಾದ ಮನೆಯಿಲ್ಲದೆ ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ವಿಚಾರ ತಿಳಿದ ತಕ್ಷಣ ಕುಲಾಲ ಸುಧಾರಕ ಸಂಘ ಸಿದ್ಧಕಟ್ಟೆಯ ಅಧ್ಯಕ್ಷ ಮನೋಜ್ ಕುಲಾಲ್ ಹಾಗೂ ಪದಾಧಿಕಾರಿಗಳು ಸ್ಪಂದಿಸಿ, ದಾನಿಗಳ ಸಹಕಾರದೊಂದಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ. ಈ ಮೂಲಕ ಸಂಘಟನೆಯ ಸೇವಾ ಉದ್ದೇಶ ಫಲಪ್ರದವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದರು.

ಇತ್ತೀಚೆಗೆ ಕುಲಾಲ ಸುಧಾರಕ ಸಂಘ ಸಿದ್ಧಕಟ್ಟೆ ವತಿಯಿಂದ ನಿರ್ಮಿಸಿಕೊಡಲಾದ ನೂತನ ಮನೆಯ ಕೀಲಿಯನ್ನು ಕುಟುಂಬದವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ ಮಾತನಾಡಿ, ಕುಲಾಲ ಸಮುದಾಯ ಅಧಿಕಾರಕ್ಕಾಗಿ ಹಂಬಲಿಸುವುದಿಲ್ಲ. ಇದೂ ರಾಜಕೀಯವಾಗಿ ಸಮುದಾಯ ಹಿಂದುಳಿಯಲು ಒಂದು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಸಮುದಾಯ ರಾಜಕೀಯವಾಗಿ ಬೆಳೆಯಲು ಇತರ ಸಮಾಜದವರು ಸಹಕಾರ ನೀಡಬೇಕು ಎಂದು ಹೇಳಿದರು.

ಶ್ರೀ ಕ್ಷೇತ್ರ ಪೂಂಜಾದ ಕೃಷ್ಣ ಪ್ರಸಾದ್ ಆಚಾರ್ಯ ಅಸ್ರಣ್ಣರು ಆಶೀರ್ವಚನ ನೀಡಿ, ಕುಲಾಲ ಸುಧಾರಕ ಸಂಘ ಸಿದ್ಧಕಟ್ಟೆಯ ಸೇವಾ ಕಾರ್ಯ ಶ್ಲಾಘನೀಯ. ಇಂತಹ ಸಮಾಜಮುಖಿ ಕಾರ್ಯಗಳಿಗೆ ದೇವರು ಇನ್ನಷ್ಟು ಶಕ್ತಿ ಮತ್ತು ಸಾಮರ್ಥ್ಯ ನೀಡಲಿ. ನೂತನ ಮನೆಯಲ್ಲಿ ವಾಸಿಸುವ ಕುಟುಂಬಕ್ಕೆ ಸುಖ, ಸಮೃದ್ಧಿ ಹಾಗೂ ಸಕಲ ಸಂಪತ್ತು ಕರುಣಿಸಲಿ ಎಂದು ಹಾರೈಸಿದರು.
ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಮಾತನಾಡಿ, ಸಣ್ಣ ಸಣ್ಣ ಸಮುದಾಯಗಳು ರಾಜಕೀಯವಾಗಿ ಮುನ್ನಡೆದರೆ ಸಮುದಾಯದ ಅಭಿವೃದ್ಧಿಗೆ ಪೂರಕವಾಗುತ್ತದೆ. ಕುಲಾಲ ಸಮುದಾಯ ದೇಶಭಕ್ತಿ ಮತ್ತು ಧಾರ್ಮಿಕ ಆಚರಣೆಗಳಿಗೆ ಮಹತ್ವ ನೀಡುತ್ತಾ ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಕೋಶಾಧಿಕಾರಿ ಸೋಮನಾಥ ಸಾಲ್ಯಾನ್, ಬಂಟ್ವಾಳ ಕುಲಾಲ ಸೇವಾದಳದ ದಳಪತಿ ಚಂದ್ರಶೇಖರ ಕಾಮಾಜೆ, ಬಂಟ್ವಾಳ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ದಿನೇಶ್ ಶೆಟ್ಟಿ, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಯೋಗೀಶ್ ಆಚಾರ್ಯ, ಬಂಟ್ವಾಳ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಪ್ರಮುಖರಾದ ರತ್ನಕುಮಾರ್ ಚೌಟ, ನಾಗೇಶ್ ಬಿಲಾಡಿ, ಕುಲಾಲ್ ಚಾವಡಿ ಅಧ್ಯಕ್ಷ ಸಂತೋಷ್ ಕಾರ್ಕಳ, ಕುಕ್ಕಿಪಾಡಿ ಕುಲಾಲ್ ಸಂಘದ ಅಧ್ಯಕ್ಷ ಯಶೋಧರ ಉಪ್ಪಿರ ಹಾಗೂ ಚೈತ್ರ ಸೂರ್ಯ ಉಪಸ್ಥಿತರಿದ್ದರು.

ಕುಮಾರಿ ಅಂಕಿತಾ ಸ್ವಾಗತಿಸಿದರು. ಕುದ್ಕೋಳಿ ಬೈಲು ವರ್ಷಾ ಪ್ರಾರ್ಥಿಸಿದರು. ಸಂತೋಷ್ ಕುಲಾಲ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು.




