ಕಲ್ಲಡ್ಕ: ಗೋಳ್ತಮಜಲು ಸರ್ಕಾರಿ ಪ್ರೌಢಶಾಲೆಯ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಸಾಧಿಸಿದ ಹಿನ್ನೆಲೆಯಲ್ಲಿ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಆ.22ರಂದು ಶಾಲಾ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಟೈಲರ್ ವಹಿಸಿದ್ದರು. ಶಾಲೆಯ ಉತ್ತಮ ಫಲಿತಾಂಶಕ್ಕಾಗಿ ಕೈಗೊಂಡ ಕ್ರಮಗಳ ಕುರಿತು ವಿಜ್ಞಾನ ಶಿಕ್ಷಕ ಚಿದಾನಂದ ಕೆ. ಮಾಹಿತಿ ನೀಡಿದರು.

ಸಾಧನೆಗೈದ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಅವರ ಪೋಷಕರೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು. ಶೇ.100ರಷ್ಟು ಫಲಿತಾಂಶಕ್ಕೆ ಕಾರಣರಾದ ಶಿಕ್ಷಕರನ್ನೂ ಎಸ್‌ಡಿಎಂಸಿ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳ ಪರವಾಗಿ ಜ್ಞಾನವಿ ಹಾಗೂ ಶಾಲೆಗೆ ಪ್ರಥಮ ಸ್ಥಾನ ಪಡೆದ ಇನ್ನಮ್ಮ ಅಫೀಫಾ ಮಾತನಾಡಿ, ಶಾಲೆಯಲ್ಲಿ ದೊರೆತ ಉತ್ತಮ ಕಲಿಕಾ ವಾತಾವರಣ ಹಾಗೂ ಶಿಕ್ಷಕರ ಮಾರ್ಗದರ್ಶನವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಳೆದ ಮೂರು ವರ್ಷಗಳ ಶಾಲಾ ದಿನಗಳ ನೆನಪುಗಳನ್ನು ಒಳಗೊಂಡ ಚಿತ್ರ ಹಾಗೂ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೋನಪ್ಪ ದೇವಸ್ಯ, ಎಸ್‌ಡಿಎಂಸಿ ಸದಸ್ಯರಾದ ನಾಗೇಶ್ ಪೂಜಾರಿ, ಕೃಷ್ಣಪ್ಪ ಪೂಜಾರಿ, ಬಾಲಕೃಷ್ಣ ಕೊಠಾರಿ, ಗೀತಾ, ಪದ್ಮಾವತಿ, ಗುಲಾಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಗಗನ್ ಕುಮಾರ್ ಪ್ರಾರ್ಥಿಸಿದರು. ಹಿಂದಿ ಭಾಷಾ ಶಿಕ್ಷಕ ಶಂಕರ್ ವೆಂಕಪ್ಪ ಪಾವಸ್ಕರ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸುಜಾತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ಟಿ. ವಂದಿಸಿದರು. ಕನ್ನಡ ಭಾಷಾ ಶಿಕ್ಷಕಿ ಸುನೀತಾ ಬಿ. ಕಾರ್ಯಕ್ರಮ ನಿರೂಪಿಸಿದರು.


