Breaking
25 Jun 2026, Thu

ವೆನ್ಲಾಕ್ ಆಸ್ಪತ್ರೆ ಅಂಗಳದಲ್ಲಿ ಕಾಲುಜಾರಿ ಬಿದ್ದು 42 ವರ್ಷದ ವ್ಯಕ್ತಿ ಮೃತ್ಯು

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಹೋದರಿಯ ಆರೋಗ್ಯ ವಿಚಾರಿಸಲು ತೆರಳಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯ ಅಂಗಳದಲ್ಲಿ ಜಾರಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ (ಜೂ.23) ರಾತ್ರಿ ಸಂಭವಿಸಿದೆ.

ಮೃತರನ್ನು ಆಲಂಕಾರು ಗ್ರಾಮದ ಕೇಪುಳು ನಿವಾಸಿ ಲಿಂಗಪ್ಪ ಪೂಜಾರಿಯವರ ಪುತ್ರ ಶಿವರಾಮ ಕೆ (42) ಎಂದು ಗುರುತಿಸಲಾಗಿದೆ. ಅವರು ಉಪ್ಪಿನಂಗಡಿ ಸೂರ್ಯ ಆಸ್ಪತ್ರೆಯ ಸ್ಕ್ಯಾನ್ ಸೆಂಟರ್ನಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಜೂ.23ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮ್ಮ ಸಹೋದರಿಯ ಆರೋಗ್ಯ ವಿಚಾರಿಸಲು ಶಿವರಾಮ ತೆರಳಿದ್ದರು. ಆಸ್ಪತ್ರೆಯಲ್ಲಿ ಸಹೋದರಿಯೊಂದಿಗೆ ಮಾತುಕತೆ ನಡೆಸಿ ಹಿಂದಿರುಗುವ ವೇಳೆ ಆಸ್ಪತ್ರೆಯ ಅಂಗಳದ ಇಂಟರ್ಲಾಕ್ ಪ್ರದೇಶದಲ್ಲಿ ಹಿಮ್ಮುಖವಾಗಿ ಜಾರಿ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು.

ತಕ್ಷಣ ಅಲ್ಲಿದ್ದವರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಮನೆಗೆ ಹಿಂತಿರುಗುವ ವೇಳೆ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದ ಹಿನ್ನೆಲೆ ಮತ್ತೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವರಾಮ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರು ಪತ್ನಿ, ಪುತ್ರ, ಪುತ್ರಿ, ತಂದೆ ಹಾಗೂ ತಾಯಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *