Breaking
23 Sep 2026, Wed

ಸತ್ತವರನ್ನೂ ಬಿಡದ ಕಳ್ಳರು: ಸಮಾಧಿ ಅಗೆದು ಮೃತದೇಹದ ಮೇಲಿದ್ದ ಚಿನ್ನದ ಸರ ದೋಚಿದ ದುಷ್ಕರ್ಮಿಗಳು

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಾನವೀಯತೆಯನ್ನೇ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಸಮಾಧಿ ಅಗೆದು ಮೃತದೇಹದ ಮೇಲಿದ್ದ ಚಿನ್ನದ ಸರವನ್ನು ಕಳ್ಳರು ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮೀನು ಮಾರಾಟಗಾರರೊಬ್ಬರು ನಿಧನರಾದ ಬಳಿಕ ಅವರ ಕೊರಳಲ್ಲಿದ್ದ ಸುಮಾರು 24 ಗ್ರಾಂ ಚಿನ್ನದ ಸರವನ್ನು ತೆಗೆಯದೆ, ಕುಟುಂಬಸ್ಥರು ಮೃತದೇಹದ ಜೊತೆಯೇ ಸಮಾಧಿ ಮಾಡಿದ್ದರು. ಈ ವಿಚಾರ ತಿಳಿದಿದ್ದ ಕಳ್ಳರು ರಾತ್ರಿ ವೇಳೆ ಸಮಾಧಿಯನ್ನು ಅಗೆದು ಚಿನ್ನದ ಸರವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಜೂನ್ 22ರಂದು ಮೃತರ 16ನೇ ದಿನದ ಪುಣ್ಯತಿಥಿ ಕಾರ್ಯಕ್ರಮಕ್ಕಾಗಿ ಕುಟುಂಬಸ್ಥರು ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸಮಾಧಿಯ ಸುತ್ತ ಮಣ್ಣು ಅಸ್ತವ್ಯಸ್ತಗೊಂಡಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಕಳ್ಳತನ ನಡೆದಿರುವುದು ಬಹಿರಂಗವಾಗಿದೆ.

ಕುಟುಂಬಸ್ಥರು ಸ್ಮಶಾನದ ಉಸ್ತುವಾರಿಯನ್ನು ಪ್ರಶ್ನಿಸಿದಾಗ, ತಡರಾತ್ರಿ ಇಬ್ಬರು ಸ್ಥಳೀಯರು ಸ್ಮಶಾನಕ್ಕೆ ಅಕ್ರಮವಾಗಿ ಪ್ರವೇಶಿಸಿ ಸಮಾಧಿ ಅಗೆದು ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವುದಾಗಿ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ಮೃತರ ಮಗ ನೀಡಿದ ದೂರಿನ ಆಧಾರದ ಮೇಲೆ ಪೀಲಮೇಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಮಶಾನದ ಉಸ್ತುವಾರಿ ಸೇರಿ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *