ಬೆಂಗಳೂರು: ಆಶೀರ್ವಾದ ಮಾಡುವ ನೆಪದಲ್ಲಿ ಬಂದ ಇಬ್ಬರು ನಾಗಸಾಧುಗಳ ವೇಷಧಾರಿಗಳು ವ್ಯಕ್ತಿಯ ಚಿನ್ನದ ಉಂಗುರ ಕಳವು ಮಾಡಿ ಪರಾರಿಯಾಗಿರುವ ಘಟನೆ ನಗರದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ವಂಚನೆಗೆ ಒಳಗಾದ ಅರುಣ್ ಶ್ರೀಪಾದ ಅವರು ನೀಡಿದ ದೂರಿನ ಮೇರೆಗೆ ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಜೂನ್ 12ರಂದು ಆರ್‌ಪಿಸಿ ಲೇಔಟ್ನಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅರುಣ್ ಶ್ರೀಪಾದ ಅವರು ಸ್ನೇಹಿತೆಯ ಕಚೇರಿಗೆ ಬಂದಿದ್ದ ವೇಳೆ ನಾಗಸಾಧುಗಳ ವೇಷದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಆರಂಭದಲ್ಲಿ ಮಾತುಕತೆ ನಡೆಸಿ ವಿಶ್ವಾಸ ಗಳಿಸಿದ್ದಾರೆ. ಬಳಿಕ ಕಾಶಿ, ಅಯೋಧ್ಯೆ ಹಾಗೂ ಉತ್ತರ ಭಾರತದ ಧಾರ್ಮಿಕ ಕ್ಷೇತ್ರಗಳು ಮತ್ತು ಪವಿತ್ರ ನದಿಗಳ ಕುರಿತು ಮಾತನಾಡಿದ್ದಾರೆ.

ಈ ಪವಿತ್ರ ಕ್ಷೇತ್ರಗಳಲ್ಲಿ ಸ್ನಾನ ಮಾಡಿದರೆ ದೋಷಗಳು ನಿವಾರಣೆಯಾಗುತ್ತವೆ ಎಂದು ಹೇಳಿ, ನೀವು ಅಂತಹ ಕ್ಷೇತ್ರಗಳಲ್ಲಿ ಸ್ನಾನ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ನಂತರ ಅರುಣ್ ಅವರ ವ್ಯವಹಾರದ ಬಗ್ಗೆ ವಿಚಾರಿಸಿ, ನಾವು ಆಶೀರ್ವಾದ ಮಾಡಿದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿದ ಅರುಣ್, “ನನಗೆ ನಮ್ಮ ದೇವರಿದ್ದಾನೆ” ಎಂದು ತಿಳಿಸಿದ್ದಾರೆ. ಆದರೂ ಆರೋಪಿಗಳು ಪೇಪರ್‌ನಲ್ಲಿ ವಿಭೂತಿ ಹಾಕಿ ಅವರ ಹಣೆ ಮೇಲೆ ತ್ರಿಶೂಲ ಇಟ್ಟು ಆಶೀರ್ವಾದ ಮಾಡುವ ನಾಟಕ ಮಾಡಿದ್ದಾರೆ.

ಈ ವೇಳೆ ಆಶೀರ್ವಾದ ಮಾಡುವ ನೆಪದಲ್ಲಿ ಅರುಣ್ ಅವರ ಎಡಗೈಯಲ್ಲಿದ್ದ 11 ಗ್ರಾಂ ತೂಕದ ಚಿನ್ನದ ಉಂಗುರವನ್ನು ಚಾಕಚಕ್ಯತೆಯಿಂದ ಕಳವು ಮಾಡಿದ್ದಾರೆ. ಘಟನೆ ನಡೆದ ಕ್ಷಣದಲ್ಲಿ ಏನಾಯಿತು ಎಂಬುದು ಅರುಣ್ ಅವರಿಗೆ ತಿಳಿದಿರಲಿಲ್ಲ.
ಮನೆಗೆ ಹೋದ ಬಳಿಕ ಉಂಗುರ ಕಾಣೆಯಾಗಿರುವುದು ಗಮನಕ್ಕೆ ಬಂದಿದ್ದು, ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಆರೋಪಿಗಳ ಪತ್ತೆಗಾಗಿ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.


