ಹೊಕ್ಕಾಡಿಗೋಳಿ: ಚಂಡಮಾರುತದ ಕಾರಣ ಅತಿಯಾದ ಮಳೆಯಾಗುವ ಸಂಭವದಿಂದ ಡಿ 7ರಂದು ನಡೆಯಬೇಕಿದ್ದ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ ಕಂಬಳವು ಮುಂದೂಡಲ್ಪಟ್ಟಿತ್ತು, ಇದೀಗ ಜಿಲ್ಲಾ ಕಂಬಳ ಸಮಿತಿ ಹೊಸ ದಿನಾಂಕ ಘೋಷಿಸಿದೆ.
ಜನವರಿ 4 ರಂದು ವಿಜೃಂಬನೆಯಿಂದ ಇತಿಹಾಸ ಪ್ರಸಿದ್ಧ ವೀರ ವಿಕ್ರಮ ಹೊಕ್ಕಾಡಿಗೋಳಿ ಕಂಬಳವು ನಡೆಯಲಿದೆ. ಹೊಸ ದಿನಾಂಕದ ಕುರಿತು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಪ್ರಕಟಣೆ ಹೊರಡಿಸಿದ್ದಾರೆ.
“ಜಿಲ್ಲಾ ಕಂಬಳ ಸಮಿತಿ (ರಿ.) ಮದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆ. ದಿನಾಂಕ 04-01-2025 ನೇ ಶನಿವಾರ ದಿವಸ ನಡೆಯಬೇಕಿದ್ದ ಮಿಯ್ಯಾರು ಕಂಬಳ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಇರುವುದರಿಂದ ಆ ದಿನ ನಡೆಸಲಾಗುವುದಿಲ್ಲ ಎನ್ನುವುದನ್ನು ಕಾರ್ಕಳ ಸಮಿತಿಯ ಕಾರ್ಯಧ್ಯಕ್ಷರಾದ ಜೀವನ್‌ದಾಸ್ ಅದ್ಯಂತಾಯರವರು ತಿಳಿಸಿರುತ್ತಾರೆ. ಈ ದಿನಾಂಕವನ್ನು ಡಿಸೆಂಬರ್ 7ನೇ ತಾರೀಕು ನಡೆಯಬೇಕಿದ್ದಂತಹ ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಕಂಬಳ ಮಳೆಯ ಕಾರಣದಿಂದ ನಡೆಸಲಾಗಿಲ್ಲ. ಆದುದರಿಂದ ಜನವರಿ 4ನೇ ತಾರೀಕಿನಂದು ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಕಂಬಳ ನಡೆಸಲು ಜಿಲ್ಲಾ ಕಂಬಳ ಸಮಿತಿಯು ಅನುಮತಿಸಿದೆ. ಜಿಲ್ಲಾ ಕಂಬಳ ಸಮಿತಿಯ ಗೌರವಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಅಭಿಪ್ರಾಯದಂತೆ ದಿನಾಂಕವನ್ನು ತಿಳಿಸಲಾಗಿದೆ” ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.