ಬಂಟ್ವಾಳ: ಸಿಡಿಮದ್ದು ತಯಾರಿಕಾ ಘಟಕದಲ್ಲಿ ರಾಸಾಯನಿಕ ಮಿಶ್ರಣದಲ್ಲಿ ಉಂಟಾದ ತೊಂದರೆಯಿಂದ ಸ್ಫೋಟ ಸಂಭವಿಸಿದ ಘಟನೆ ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ನೂಜಿ ಎಂಬಲ್ಲಿ ನಡೆದಿದೆ.

ಅಬ್ದುಲ್ ಗಫೂರ್ ಅವರು ಕಳೆದ ಹಲವು ವರ್ಷಗಳಿಂದ ಶೆಡ್ ನಿರ್ಮಿಸಿ ಸಿಡಿಮದ್ದು ತಯಾರಿಕೆಯ ಕಾರ್ಯ ನಡೆಸುತ್ತಿದ್ದರು. ಮಾ.6 ರಂದು ಸಂಜೆ ಕಾರ್ಮಿಕರು ಸಿಡಿಮದ್ದಿಗೆ ಬೇಕಾದ ರಾಸಾಯನಿಕವನ್ನು ಮಿಶ್ರಣ ಮಾಡಿ ಬಳಿಕ ಕಾಫಿ ಕುಡಿಯಲು ತೆರಳಿದ್ದ ವೇಳೆ ಏಕಾಏಕಿ ಸ್ಫೋಟ ಸಂಭವಿಸಿದೆ.

ಈ ಘಟನೆಯಲ್ಲಿ 5 ಸೆಂಟ್ಸ್ ಜಾಗ ಸಂಪೂರ್ಣ ಹಾನಿಯಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.







