ವಿಟ್ಲ: ವಿಟ್ಲ ಕೇಪು ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆ ಪಡಿಬಾಗಿಲಿನಲ್ಲಿ ನೂತನವಾಗಿ ನಿರ್ಮಾಣವಾದ ವಿವೇಕ ತರಗತಿ ಕೊಠಡಿ ಹಾಗೂ ಎಂ ಆರ್ ಪಿ ಎಲ್ ಸಂಸ್ಥೆಯ ಸಿ ಎಸ್ ಆರ್ ಅನುದಾನದಿಂದ ನಿರ್ಮಾಣವಾದ ತರಗತಿ ಕೊಠಡಿಗಳ ಉದ್ಘಾಟನೆ ನಡೆಯಿತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ,ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಕಾರಣ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಎರಡು ಗ್ರಾಮ ಪಂಚಾಯಿತಿಗೆ ಒಂದರಂತೆ ಕೆಪಿಎಸ್ ಶಾಲೆಗಳನ್ನು ತೆರೆಯುವಂತೆ ಪ್ರಯತ್ನಿಸಲಾಗುವುದು, ಯಾವ ಮಗುವೂ ವಿದ್ಯಾಭ್ಯಾಸದಿಂದ ವಂಚಿತವಾಗಬಾರದು. ಉತ್ತಮ ಆರೋಗ್ಯ ಮತ್ತು ಉತ್ತಮ ಉದ್ಯೋಗ ದೊರೆತಾಗ ಸ್ವತಂತ್ರವಾಗಿ ಬದುಕಲು ಸಹಾಯವಾಗುತ್ತದೆ, ಶಿಕ್ಷಣವು ಕೇವಲ ಪಠ್ಯ ಪುಸ್ತಕ ಸೀಮಿತವಾಗಿರದೇ ಆಚಾರ ವಿಚಾರ ಸಂಸ್ಕೃತಿಯನ್ನೂ ಬಿಂಬಿಸಬೇಕಾಗುತ್ತದೆ. ಮೌಲ್ಯಯುತ ಶಿಕ್ಷಣದ ಮೂಲಕ ಜೀವನದಲ್ಲಿ ಸಂಸ್ಕಾರವಂತರಾಗಿ ಸಮಾಜವನ್ನು ಕಟ್ಟುವಲ್ಲಿ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕಾಗಿದೆ ಎಂದು ತಿಳಿಸಿದರು.
ಎಂಆರ್ ಪಿಎಲ್ ಸಂಸ್ಥೆಯ ಅನುದಾನದಿಂದ ನಿರ್ಮಾಣಗೊಂಡ ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಸೀನಿಯರ್ ಮ್ಯಾನೇಜರ್ ದಯಾನಂದ ಪ್ರಭು ಮಾತನಾಡಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಪ್ರಧಾನ ಮಂತ್ರಿಗಳ ಕನಸಿನಂತೆ ಫಿಟ್ ಇಂಡಿಯಾ ಸ್ಕಿಲ್ ಇಂಡಿಯಾ ಎಂಬ ವಿಚಾರಗಳಿಗೆ ಇಂದು ಎಂ ಆರ್ ಪಿ ಎಲ್ ಸಂಸ್ಥೆ ಸ್ಪಂದನೆ ನೀಡುತ್ತಿದೆ. ಈ ಪ್ರಕಾರವಾಗಿ ಪೌಷ್ಠಿಕ ಆಹಾರ ವಿತರಣೆ ಹಾಗೂ ಸಮಾಜ ಸೇವೆಯ ಮೂಲಕ ತನ್ನದೇ ಆದ ಸಮಾಜದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿವೆ, ಹಲವು ಸಂಸ್ಥೆಗಳು ತಮ್ಮ ಸೌಲಭ್ಯವನ್ನು ಎಲ್ಲಾ ಕ್ಷೇತ್ರಗಳಿಗೆ ಮೀಸಲಿಡುವುದರ ಮೂಲಕ ಉತ್ತಮ ಸಮಾಜವನ್ನು ಹೊಂದಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಪು ಗ್ರಾಮ ಪಂಚಾಯತ್ ನ ಅಧ್ಯಕ್ಷ ರಾಘವ ಮಣಿಯಾಣಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಎಂ ಆರ್ ಪಿ ಎಲ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಸೀನಿಯರ್ ಮ್ಯಾನೇಜರ್ ದಯಾನಂದ ಪ್ರಭು ಹಾಗೂ ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಿ ಸ್ಪಂದನೆ ನೀಡಿದ ಕೇಪು ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ,ಇವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ, ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೇಪು ಗ್ರಾಮ ಪಂಚಾಯತಿನ ಸದಸ್ಯರಾದ ಜಗಜೀವನ್ ರಾಮ್ ಶೆಟ್ಟಿ, ಪುರುಷೋತ್ತಮ ಗೌಡ, ಅಬ್ದುಲ್ ಕರೀಂ, ಸದಸ್ಯೆಯರಾದ ಮೋಹಿನಿ, ವಿಶಾಲಾಕ್ಷಿ, ವಿದ್ಯಾಸಿರಿ ಶಿಕ್ಷಣ ಕೇಂದ್ರ ಪಡಿಬಾಗಿಲು ಇದರ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ದಂಬೆಕಾನ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ವಿಶಾಲಾಕ್ಷಿ ಮತ್ತು ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಸಂದೇಶ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾಗಿದ್ದ ಎಂ.ಎಸ್ ಮಹಮದ್, ವಿಟ್ಲ ಪಂಚಾಯತ್ ನ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಶ್ರೀನಿವಾಸ ಶೆಟ್ಟಿ, ಮುರಳಿಧರ ರೈ ಮಠಂತಬೆಟ್ಟು, ಸಂಗಮ ಯುವಕ ಮಂಡಲದ ಉಪಾಧ್ಯಕ್ಷ ರಘುನಾಥ್, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಆನಂದ ಆಚಾರ್ಯ, ಕೇಪು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪುಷ್ಪ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿ ಯತೀಶ್ ಉಪಸ್ಥಿತರಿದ್ದರು.
ವಿದ್ಯಾಸಿರಿ ಟ್ರಸ್ಟ್ ಪಡಿಬಾಗಿಲು ಇದರ ಗೌರವಾಧ್ಯಕ್ಷರಾದ ಲಿಂಗಪ್ಪಗೌಡ ಸ್ವಾಗತಿಸಿದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಜಾತ ಕೆ. ರೈ ವಂದಿಸಿದರು. ಸಹ ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕರು ಸಹಕರಿಸಿದರು.