ಮಂಗಳೂರು: ಹೊರಗುತ್ತಿಗೆ ನೌಕರನಿಂದ ಲಂಚ ಸ್ವೀಕರಿಸಿದ ಮೂವರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಉಳ್ಳಾಲ ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೆಯರ್ ಕೃಷ್ಣಮೂರ್ತಿ, ಮಂಗಳೂರು ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಬಿ.ಕೆ. ರಾಜು ಮತ್ತು ಸರ್ವೆ ಸುಪರ್‌ವೈಸರ್ ಎಸ್. ಧನಶೇಖರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ.

ತನ್ನ ಬಾಕಿ ಇರುವ ಸಂಬಳದ ಬಿಲ್ ಮಾಡಿಕೊಡಲು ಮತ್ತು ತನ್ನನ್ನು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯದಲ್ಲಿ ಮುಂದುವರಿಸಲು ನೇಮಕಾತಿ ಆದೇಶವನ್ನು ಮಾಡಿಸಿಕೊಡಲು ಕೃಷ್ಣಮೂರ್ತಿ 50,000 ರೂ, ಬಿ.ಕೆ.ರಾಜು 10,000 ರೂ., ಎಸ್.ಧನಶೇಖರ 10,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಯುಪಿಒಆರ್‌ನಲ್ಲಿ ಹೊರಗುತ್ತಿಗೆ ನೌಕರರಾಗಿರುವ ವ್ಯಕ್ತಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಮಂಗಳೂರು ಲೋಕಾಯುಕ್ತ ಪೊಲೀಸರು ಮೂವರನ್ನು ಸಾಕ್ಷಿಸಮೇತವಾಗಿ ಸೆರೆಹಿಡಿದಿದ್ದಾರೆ.




