ಮಂಗಳೂರು : ಡಿಜಿಟಲ್ ಅರೆಸ್ಟ್ ಪ್ರಕರಣವೊಂದರಲ್ಲಿ ಸಂತ್ರಸ್ತೆ ಕಳೆದುಕೊಂಡಿದ್ದ 17 ಲಕ್ಷ ರೂ.ಗಳ ಹಣದ ಸಾಂಕೇತಿಕ ವರ್ಗಾವಣೆಯು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿಸಿಪಿಗಳಾದ ಮಿಥುನ್ ಹಾಗೂ ರವಿಶಂಕರ್ ಅವರ ಸಮ್ಮುಖದಲ್ಲಿ ನಡೆಯಿತು.
ಬಳಿಕ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಮಿಥುನ್, ಅ. 23ರಂದು ಬಿಜೈ ನಿವಾಸಿ 79ರ ಹರೆಯದ ಮಹಿಳೆಗೆ ಪೊಲೀಸ್ ಸಮಸ್ತ್ರದಲ್ಲಿದ್ದ ವ್ಯಕ್ತಿ ವಾಟ್ಸಾಪ್ ಕರೆ ಮಾಡಿ ಮಹಿಳೆಯ ಮೇಲೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ ಎಂದು ಬಂಧನದ ಬೆದರಿಕೆಯೊಡ್ಡಿದ್ದಾನೆ.

ಅದೇ ದಿನ ಸಂಜೆ ಸುಮಾರು 6 ಗಂಟೆಯ ವೇಳೆಗೆ ತಮ್ಮ ಫ್ಲ್ಯಾಟ್‌ನ ಮಹಿಳೆಯೊಬ್ಬರ ಜೊತೆ ಈ ವಿಚಾರ ತಿಳಿಸಿದಾಗ, ಆಕೆ ಸಂತ್ರಸ್ತೆ ಮಹಿಳೆಯ ಜೊತೆಗೆ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತಾರೆ. ತಕ್ಷಣ ಠಾಣಾಧಿಕಾರಿ 1930 ಸಹಾಯವಾಣಿ ಮೂಲಕ ಬ್ಯಾಂಕ್ ಖಾತೆಯಲ್ಲಿದ್ದ 17 ಲಕ್ಷ ರೂ.ಗಳನ್ನು ಬ್ಲಾಕ್ ಮಾಡಿಸಿ ಬ್ಯಾಂಕ್ ಮ್ಯಾನೇಜರ್‌ಗೆ ಕರೆ ಮಾಡಿ ಹಣ ಇರುವ ಬಗ್ಗೆ ದೃಢಪಡಿಸುತ್ತಾರೆ. ಅ. 24ರಂದು ಹಣ ಬಿಡುಗಡೆಗೆ ಮಾಹಿತಿಯೊಂದಿಗೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದ್ದು, ಬಳಿಕ ಎರಡು ದಿನ ಸಾರ್ವತ್ರಿಕ ರಜೆ ಇದ್ದ ಕಾರಣ ಅ. 27ರಂದು ನ್ಯಾಯಾಲಯ ಹಣ ಬಿಡುಗಡೆಗೆ ಆದೇಶ ನೀಡಿದೆ. ಆ ಆದೇಶದಂತೆ ಸಂತ್ರಸ್ತೆಯ ಖಾತೆಗೆ ಹಣ ವರ್ಗಾವಣೆ ಮಾಡಿರುವುದಾಗಿ ಹೇಳಿದರು.

ಈ ಪ್ರಕರಣದಲ್ಲಿ ತ್ವರಿತ ಗತಿಯಲ್ಲಿ ಸಂತ್ರಸ್ತೆ ದೂರು ನೀಡಿದ ಕಾರಣ ಕ್ಷಿಪ್ರ ಗತಿಯ ಕಾರ್ಯಾಚರಣೆಯ ಮೂಲಕ ಪೊಲೀಸರು ಸಂತ್ರಸ್ತೆಯ ಬ್ಯಾಂಕ್ ಖಾತೆಯಿಂದ ಸೈಬರ್ ಖದೀಮರ ಖಾತೆಗೆ ವರ್ಗಾವಣೆಯಾಗುತ್ತಿದ್ದ ಹಣವನ್ನು ತಡೆಯಲು ಸಾಧ್ಯವಾಯಿತು. ಈ ಮೂಲಕ ಪೂರ್ಣ ಹಣ ವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಇಂತಹ ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ತರು ಅಂಜಿಕೆ, ಭಯದಿಂದಾಗಿ ದೂರು ನೀಡುವಾಗ ತಡವಾಗುವ ಕಾರಣ ಈ ರೀತಿ ಸೈಬರ್ ಖದೀಮರಿಂದ ದೋಚಲಾಗುವ ಹಣವನ್ನು ವಶಪಡಿಸಲು ಕಷ್ಟವಾಗುತ್ತದೆ ಎಂದವರು ಹೇಳಿದರು.

ಮಂಗಳೂರು ನಗರ ವ್ಯಾಪ್ತಿಯಲ್ಲಿ ಈ ವರ್ಷ 8 ಪ್ರಕರಣಗಳಲ್ಲಿ 8ಕೋಟಿ ರೂ.ಗಳನ್ನು ಸೈಬರ್ ಖದೀಮರು ದೋಚಿದ್ದಾರೆ. ಈವರೆಗೆ ಇದರಲ್ಲಿ 35.98 ಲಕ್ಷ ರೂ.ಗಳನ್ನು ವಶಪಡಿಸಲಾಗಿದೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹಿರಿಯ ನಾಗರಿಕರು ಹೆಚ್ಚಾಗಿ ಬಲಿಪಶುಗಳಾಗುತ್ತಿದ್ದಾರೆ. ವಾಟ್ಸಾಪ್ ಕರೆಗಳ ಮೂಲಕ ಅಪರಿಚಿತ ವ್ಯಕ್ತಿಗಳು ಕರೆ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಒತ್ತಾಯಿಸಿದಾಗ ವಿಚಲಿತರಾಗದೆ, ಭಯಗೊಳ್ಳದೆ ಕರೆ ಕಟ್ ಮಾಡಿ ತಕ್ಷಣ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು ಎಂದರು.



