ಚಿಕ್ಕಮಗಳೂರು: ಸಿಡಿಲು ಬಡಿದು ಯುವ ಕಾರ್ಮಿಕರೋರ್ವರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ಗುಮ್ಮನಕಾನು ತೋಟದಲ್ಲಿ ಅ.17 ಬೆಳಗ್ಗಿನ ವೇಳೆ ನಡೆದಿದೆ.
ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕ ಕುಟುಂಬದ ಸದಸ್ಯ ಮೌರುದ್ಧಿನ್(16) ಸಿಡಿಲು ಬಡಿದು ಮೃತಪಟ್ಟ ಯುವಕನಾಗಿದ್ದಾನೆ.

ಮಾಹಿತಿಯ ಪ್ರಕಾರ ಮೌರುದ್ದಿನ್ ಮತ್ತು ಮತ್ತೊಬ್ಬ ಯುವಕ ಇಬ್ಬರೂ ತೋಟದ ಕೂಲಿ ಲೈನಿನಲ್ಲಿ ಮೊಬೈಲ್ ಚಾರ್ಜ್ ಗೆ ಹಾಕಿ ಮಲಗಿದ್ದರು ಎನ್ನಲಾಗಿದೆ. ಬೆಳಗಿನ ಜಾವ ಮಳೆ ಹಾಗೂ ಮಿಂಚು ನಡುವೆ ಸಿಡಿಲು ಬಡಿದಿದ್ದು, ಅದರಿಂದ ಮೌರುದ್ದಿನ್ ತೀವ್ರ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಅಂತ ಹೇಳಲಾಗುತ್ತಿದೆ.

ತಕ್ಷಣ ಸ್ಥಳೀಯರು ಹಾಗೂ ಹಿರೇಬೈಲಿನ ಸಾಮಾಜಿಕ ಕಾರ್ಯಕರ್ತ ಶರೀಫ್ ಅವರ ನೆರವಿನಿಂದ ಯುವಕನನ್ನು ತಕ್ಷಣ ಕಳಸ ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯೆಯೇ ಮೌರುದ್ದಿನ್ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.




