Breaking
12 May 2026, Tue

ಉಡುಪಿ: ಕಾರಿನಲ್ಲಿ ಅಕ್ರಮ ಗೋ ಸಾಗಾಟ: ಇಬ್ಬರ ಬಂಧನ

ಉಡುಪಿ: ಕಾರಿನಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಅಮಾಸೆಬೈಲು ಪೊಲೀಸರು ತಡೆಹಿಡಿದು ಗೋವುಗಳನ್ನು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.

ಕಂಡ್ಲೂರು ನಿವಾಸಿ, ಕಾರು ಚಾಲಕ ಶಾಹೀದ್ ಕರಾಣಿ ಮತ್ತು ಆತನಿಗೆ ಮಾರ್ಗದರ್ಶನ ನೀಡಲು ಬೈಕ್‌ನಲ್ಲಿ ಸಾಗುತ್ತಿದ್ದ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ.

ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆಯಿಂದ ಮೂರು ಗಂಡು ಕರುಗಳನ್ನು ಮಾಂಸಕ್ಕಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಅಶೋಕ್ ಕುಮಾರ್ ಮತ್ತು ಅವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ನಡಂಬೂರು ಕ್ರಾಸ್ ಬಳಿ ಕಾರನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಚಾಲಕ ವೇಗವಾಗಿ ಕಾರನ್ನು ಚಲಾಯಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.

ಈ ವೇಳೆ ಪೊಲೀಸರು ಕಾರನ್ನು ಬೆನ್ನಟ್ಟಿ ಬಸ್ರೂರು ಬಳಿ ವಾಹನವನ್ನು ತಡೆದಾಗ, ಅದರೊಳಗೆ ಮೂರು ಗಂಡು ಕರುಗಳು ಇರುವುದು ಪತ್ತೆಯಾಗಿದೆ.

ಆರೋಪಿ ಚಾಲಕ ಮತ್ತು ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ಕಾರಿಗೆ ಮಾರ್ಗದರ್ಶನ ನೀಡುತ್ತಿದ್ದ ಬೈಕ್ ಸವಾರ ಅಪ್ರಾಪ್ತ ಬಾಲಕನನ್ನೂ ವಶಕ್ಕೆ ಪಡೆದಿದ್ದಾರೆ.
ಆತನನ್ನು ನಿಟ್ಟೂರಿನ ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದ್ದು, ಆತ ಚಲಾಯಿಸುತ್ತಿದ್ದ ಬೈಕನ್ನೂ ವಶಪಡಿಸಿಕೊಳ್ಳಲಾಗಿದೆ.

ಪೊಲೀಸರು ವಶಪಡಿಸಿಕೊಂಡ ಕಾರು ಮತ್ತು ಬೈಕ್‌ನ ಅಂದಾಜು ಮೌಲ್ಯ 6.25 ಲಕ್ಷ ರೂ. ಆಗಿದ್ದು, ಮೂರು ಗಂಡು ಕರುಗಳ ಮೌಲ್ಯ 5,000 ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *