Breaking
24 Mar 2026, Tue

ಪೊಡವಿಗೊಡೆಯ ಶ್ರೀ ಕೃಷ್ಣನ ವಿಟ್ಲಪಿಂಡಿ ಉತ್ಸವ ಸಂಪನ್ನ

ಉಡುಪಿ: ಪೊಡವಿಗೊಡೆಯ ಶ್ರೀಕೃಷ್ಣನ ಜನ್ಮ ಹಾಗೂ ಬಾಲಲೀಲೆಗಳನ್ನು ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವವು ಕೃಷ್ಣಮಠದಲ್ಲಿ ಸೋಮವಾರ ಸಂಪನ್ನಗೊಂಡಿತು.

ಮಧ್ಯಾಹ್ನದ ವೇಳೆ ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.

ಬಳಿಕ ಉತ್ಸವಕ್ಕೆಂದು ವಿಶೇಷವಾಗಿ ತಯಾರಿಸಲಾದ ಮೃಣ್ಮಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತಂದು ಚಿನ್ನದ ರಥದಲ್ಲಿರಿಸಿ ರಥಬೀದಿಯ ಸುತ್ತ ಮೆರವಣಿಗೆ ನಡೆಸಲಾಯಿತು.

ಇನ್ನೊಂದು ರಥದಲ್ಲಿ ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಉತ್ಸವ ಮೂರ್ತಿನ್ನಿರಿಸಿ ಮೆರವಣಿಗೆ ನಡೆಸಲಾಯಿತು. ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶೀಂಧ್ರತೀರ್ಥ ಶ್ರೀಪಾದರು, ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಹಾಗೂ ವಿವಿಧ ಗಣ್ಯರು ಈ ಉತ್ಸವದಲ್ಲಿ ಭಾಗವಹಿಸಿದ್ದರು.

ಶ್ರೀ ಕೃಷ್ಣ ಮಠದ ಎದುರು ಹಾಗೂ ರಥಬೀದಿಯಲ್ಲಿ ನಿರ್ಮಿಸಲಾದ ಗುರ್ಜಿಗಳಲ್ಲಿ ಮೊಸರು ತುಂಬಿದ ಮಡಿಕೆಗಳನ್ನು ನೇತುಹಾಕಲಾಗಿತ್ತು. ಅದನ್ನು ಕೃಷ್ಣನ ಜನ್ಮವನ್ನು ಸಾರುವ ಗೊಲ್ಲ ವೇಷಧಾರಿಗಳು ಒಡೆದು ವಿಟ್ಲಪಿಂಡಿಯನ್ನು ಸಂಭ್ರಮದಿಂದ ಆಚರಿಸಿದರು.

ಆ ಬಳಿಕ ರಥಬೀದಿಯಲ್ಲಿ ನಡೆಯುವ ವಿಟ್ಲಪಿಂಡಿಯ ಹಬ್ಬದಲ್ಲಿ ಪಾಲ್ಗೊಂಡ ಅನೇಕ ಭಕ್ತರಿಗೆ, ಶ್ರೀ ಕೃಷ್ಣ ಮಠಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಉಂಡೆ, ಚಕ್ಕುಲಿಯ ಪ್ರಸಾದವನ್ನು ವಿತರಣೆ ಮಾಡಲಾಯಿತು.

Leave a Reply

Your email address will not be published. Required fields are marked *