Breaking
10 May 2026, Sun

ನಕಲಿ ದಾಖಲೆ ಸೃಷ್ಟಿಸಿ ವಂಚನೆ ಪ್ರಕರಣ : ಮತ್ತೆ ನಾಲ್ಕು ಮಂದಿ ಆರೋಪಿಗಳು ಪೊಲೀಸ್‌ ವಶಕ್ಕೆ

ಮಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಮತ್ತು ಸರಕಾರಕ್ಕೆ ವಂಚಿಸುತ್ತಿದ್ದ ಜಾಲದ ವಿರುದ್ಧ ಸಮರಸಾರಿರುವ ಮಂಗಳೂರಿನ ಸಿಸಿಬಿ ಪೊಲೀಸರು ಮತ್ತೆ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ತೊಕ್ಕೊಟ್ಟು ಅಂಬಿಕಾ ರಸ್ತೆ ನಿವಾಸಿ ನಿಶಾಂತ್ ಕುಮಾರ್ (28), ಬಂಟ್ವಾಳ ತಾಲೂಕು ಪುದು ಸುಜೀರ್ ರಸ್ತೆ ನಿವಾಸಿ ನಿತಿನ್ ಕುಮಾರ್ (31), ಇಂದಿರಾನಗರ ಹಾಲಾಡಿ ಸಜಿಪ ಮುನ್ನೂರು ನಿವಾಸಿ ಹಸನ್ ರಿಯಾಝ್ (46) ಮತ್ತು ಕಾವೂರು ಪಳನೀರ್ ನಿವಾಸಿ ಹನೀಫ್ (39) ಎಂದು ಗುರುತಿಸಲಾಗಿದೆ.

ಈ ಹಿಂದೆ ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿ ಅವುಗಳನ್ನು ನೈಜ ದಾಖಲಾತಿಗಳು ಎಂದು ನಂಬಿಸಿ ವಿವಿಧ ಇಲಾಖೆಗಳಿಗೆ ಮತ್ತು ನ್ಯಾಯಾಲಯಕ್ಕೆ ನೀಡಿ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಜಾಮೀನು ನೀಡಲು ಬಳಕೆ ಮಾಡುತ್ತಿದ್ದ ಆರೋಪದ ಮೇರೆಗೆ ಬಪ್ಪನಾಡುವಿನ ಅಬ್ದುಲ್ ರೆಹಮಾನ್ (46) ಎಂಬಾತನನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದು, ಆತ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಮತ್ತೆ ನಾಲ್ಕು ಮಂದಿಯನ್ನು ದಸ್ತಗಿರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ವಂಚನೆ ಜಾಲದಲ್ಲಿ ಇನ್ನೂ ಹಲವಾರು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *