ಬಂಟ್ವಾಳ: ರಕ್ತದೊತ್ತಡ ಕಡಿಮೆಯಾದ ಪರಿಣಾಮ ಗಂಭೀರ ಪರಿಸ್ಥಿತಿಗೆ ತಲುಪಿದ ಆಟೋ ಚಾಲಕರೊಬ್ಬರ ಜೀವವನ್ನು ಮಹಿಳೆಯೊಬ್ಬರು ಉಳಿಸಿದ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ.
ಇಲ್ಲಿನ ಪ್ರಧಾನಮಂತ್ರಿ ಜನಔಷಧಿ ಕೇಂದ್ರದ ಸಿಬ್ಬಂದಿಯಾಗಿರುವ ಸುರೇಖಾ ಅವರು ಆಟೋ ಚಾಲಕನ ಪ್ರಾಣ ಉಳಿಸಿದ ಮಹಿಳೆಯಾಗಿದ್ದಾರೆ.

ಮನೋಜ್ ಕುಲಾಲ್ ಬಸಬೈಲ್ ಇವರ ಮಾಲಕತ್ವದ ಪ್ರಧಾನಮಂತ್ರಿ ಜನಔಷಧಿ ಕೇಂದ್ರವು ಪುಂಜಾಲಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ಕೇಂದ್ರಕ್ಕೆ ಆಟೋ ಚಾಲಕರೊಬ್ಬರು ತನ್ನ ಅಣ್ಣನಿಗೆ ಔಷಧಿ ಖರೀದಿಸಲು ಬಂದಿದ್ದರು.
ಔಷಧಿ ಪಡೆದುಕೊಂಡ ನಂತರ ಚಿಲ್ಲರೆ ಹಣ ನೀಡಲು ತನ್ನ ಆಟೋದ ಬಳಿಗೆ ತೆರಳಿದಾಗ, ಅಸ್ವಸ್ಥಗೊಂಡು ತಲೆ ತಿರುಗಿ ಬಿದ್ದ ಅವರ ತುರ್ತು ಪರಿಸ್ಥಿತಿಯನ್ನು ಗಮನಿಸಿದ್ದಾರೆ.

ಈ ವೇಳೆ ಸುರೇಖಾ ಅವರು ಇತರ ಸಿಬ್ಬಂದಿಯ ಸಹಾಯ ಪಡೆದು ತಕ್ಷಣ ಅವರನ್ನು ಒಳಗೆ ಕರೆದುಕೊಂಡು ಹೋಗಿ ರಕ್ತದೊತ್ತಡ ಪರೀಕ್ಷಿಸಿದ್ದಾರೆ.
ಈ ಸಂದರ್ಭ ರಕ್ತದೊತ್ತಡ ತೀರಾ ಕಡಿಮೆಯಾಗಿ ಅಪಾಯಕಾರಿ ಸ್ಥಿತಿಗೆ ತಲುಪಿರುವುದು ಕಂಡುಬಂದಿದೆ. ಈ ವೇಳೆ ತಕ್ಷಣವೇ ಅವಶ್ಯಕ ಉಪಚಾರ ನೀಡಿದರೂ , ವ್ಯಕ್ತಿ ಪ್ರಜ್ಞೆ ಕಳೆದುಕೊಂಡಿದ್ದರು. ಆ ಸಂದರ್ಭದಲ್ಲೇ ಸುರೇಖಾ ಅವರು ಹೃದಯ ಪಂಪ್ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಿದ ಪರಿಣಾಮ ಆಟೋ ಚಾಲಕ ಅವರಿಗೆ ಪ್ರಜ್ಞೆ ಮರಳಿ ಬಂದಿದೆ. ನಂತರ ಅವರನ್ನು ತಜ್ಞ ವೈದ್ಯರ ಬಳಿಗೆ ತಪಾಸಣೆಗೆ ಶಿಫಾರಸ್ಸು ಮಾಡಲಾಯಿತು.
ಸುರೇಖಾರವರ ಈ ಮಾನವೀಯ ಕಾಯ೯ಕ್ಕೆ ಸಾವ೯ಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೀಯ ವ್ಯಕ್ತವಾಗಿದೆ.



