Breaking
24 Mar 2026, Tue

ಕುಮ್ಡೇಲ್: ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆಯಿಂದ ನಾರಾಯಣಗುರು ಜಯಂತಿ ಆಚರಣೆ

ಬಂಟ್ವಾಳ : ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಹಾಗೂ ಮಹಿಳಾ ವೇದಿಕೆ ಶ್ರೀ ಗುರುಸದನ ಕುಮ್ಡೇಲ್, ಪುದು ಇದರ ಅಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜಯಂತಿ ಆಚರಣೆ ಕಾರ್ಯಕ್ರಮ ಸೆ. 7 ರಂದು ಶ್ರೀ ಗುರುಸದನ, ಕುಮ್ಡೇಲ್, ಪುದುವಿನಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿ ಗುರು ಸಂದೇಶ ನೀಡಿದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಟ್ಟು, ವಿದ್ಯೆಯನ್ನೇ ಮಕ್ಕಳಿಗೆ ಅಸ್ತಿಯನ್ನಾಗಿ ಮಾಡುವ, ಮಕ್ಕಳು ಮುಂದೆ ವಿದ್ಯಾವಂತರಾಗಿ ಕುಟುಂಬ ಸಂಸ್ಕೃತಿಯಲ್ಲಿ ಬೆಳೆದು ತಮ್ಮನ್ನು ಸಾಕಿದ ತಂದೆ ತಾಯಿಯನ್ನು ಎಂದೂ ಮರೆಯದಿರಿ ಎಂದರು. ನಾರಾಯಣ ಗುರುಗಳು ಜಾತಿ ಧರ್ಮಗಳ ನಡುವೆ ವೈಷಮ್ಯವಿರುವ ಕಾಲದಲ್ಲಿ ಶಿಕ್ಷಣ ಹಾಗೂ ಸಂಘಟನೆಗಳಿಗೆ ಪ್ರಧಾನ್ಯತೆ ನೀಡಿ ಮನುಕುಲವನ್ನು ಉದ್ದಾರ ಮಾಡಿದ ಮಹಾನ್ ಮಾನವತಾವಾದಿ, ಅವರ ಸಂದೇಶ ಸರ್ವಾಕಾಲಿಕವಾಗಿದ್ದು, ಸರ್ವರ ಸಂಗದೊಂದಿಗೆ ಸುಸಂಸ್ಕೃತ ಸಮಾಜಕ್ಕಾಗಿ ಸಂಘಟನೆಯನ್ನು ಬಲಪಡಿಸೋಣ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆಯ ಅಧ್ಯಕ್ಷ ಸುದರ್ಶನ್ ಡಿ ಸುವರ್ಣ ಅವರು, ಊರಿನ ಸಮಾಜದ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಸಂಘಟನೆ ಕಟ್ಟಿ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತಿರುವ ಗುರು ವೇದಿಕೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹೇಳಿದರು.

ಸಭಾ ವೇದಿಕೆಯಲ್ಲಿ ಕುಮ್ಡೇಲ್ ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆಯ ಅಧ್ಯಕ್ಷ ನವೀನ್ ಪೂಜಾರಿ ಮಾರಿಪಳ್ಳ, ಗೌರವಧ್ಯಕ್ಷ ನಾಗಪ್ಪ ಪೂಜಾರಿ ಕಬೇಲ, ಮಹಿಳಾ ವೇದಿಕೆಯ ಅಧ್ಯಕ್ಷೆ ಭಾಗ್ಯವತಿ ನಾಗೇಶ್ ಕೋಟ್ಯಾನ್, ಗೌರವಧ್ಯಕ್ಷೆ ವೇದಾವತಿ ಶೇಖರ್ ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆಯ ಲಾಂಛನವನ್ನು ಬಿಡುಗಡೆ ಗೊಳಿಸಲಾಯಿತು. ಗುರು ಸದನದ ಮೇಲ್ವಿಚಾರಕ ಲೋಕೇಶ್ ಕುಮ್ಡೇಲ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಪುದು ನಾರಾಯಣ ಗುರು ವೇದಿಕೆಯ ಉಪಾಧ್ಯಕ್ಷ ಸಚಿನ್ ಪೂಜಾರಿ ಕೊಡ್ಮಾಣ್ ಸ್ವಾಗತಿಸಿ, ಸದಸ್ಯ ಬ್ರಿಜೇಶ್ ಅಂಚನ್ ಪ್ರಾಸ್ತವಿಕವಾಗಿ ಮಾತನಾಡಿದರು, ಜತೆ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್ ಕುಮ್ಡೇಲ್ ಧನ್ಯವಾದವಿತ್ತು. ಕಿಶೋರ್ ಕುಮಾರ್ ಸುಜೀರ್ ಕಾರ್ಯಕ್ರಮ ನಿರೂಪಿಸಿದರು, ಜಗದೀಶ್ ಪೂಜಾರಿ ಕುಮ್ಡೇಲ್, ಅಶೋಕ್ ಹೊಯ್ಗೆಗದ್ದೆ ಸಹಕರಿಸಿದರು.

ಬೆಳಿಗ್ಗೆ ವಿವಿಧ ಭಜನಾ ತಂಡಗಳಿಂದ ಭಜನೆ ನಡೆದಿದ್ದು, ಮಧ್ಯಾಹ್ನ ಗುರು ಪೂಜೆ ನಡೆದು ಅನ್ನಸಂತರ್ಪಣೆ ಜರುಗಿತು.

Leave a Reply

Your email address will not be published. Required fields are marked *