ಪುತ್ತೂರು: ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕುಲೆಗ್ ಮಲ್ಲ ಪಾಲ್ ಎಂಬ ದ್ಯೇಯದಲ್ಲಿ, ಉದ್ಯೋಗ ಸೃಷ್ಟಿಗೆ ಸ್ಥಳೀಯರಿಗೆ ಆದ್ಯತೆ ಒದಗಿಸಿ ಎಂಬ ಆಗ್ರಹದೊಂದಿಗೆ, ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸು ಜಾರಿಗೆ ತರುವಂತೆ ಆಗ್ರಹಿಸಿ ದ.ಕ. ಜಿಲ್ಲೆಯಲ್ಲಿ ಸೆ. 7ರಿಂದ 9ರ ತನಕ ಡಿವೈಎಫ್‌ಐ ವತಿಯಿಂದ ಯುವಜನ ಜಾಥಾ ಮತ್ತು ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ತಿಳಿಸಿದ್ದಾರೆ.

ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ ಅವರು ಸೆ.7ರಂದು ಬೆಳಗ್ಗೆ ಬೆಳ್ತಂಗಡಿ ಬಸ್ಸು ನಿಲ್ದಾಣದಲ್ಲಿ ಯುವಜನ ಜಾಥಾ ಉದ್ಘಾಟನೆಗೊಳ್ಳಲಿದೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ರಂಗಕರ್ಮಿ ಸತೀಶ್ ಶೆಟ್ಟಿ ಹಿರಿಯಡ್ಕ, ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಲವಿತ್ರ ವಸ್ತದ್ ಭಾಗವಹಿಸಿ ಮಾತನಾಡಲಿದ್ದಾರೆ. ಬಳಿಕ ಜಾಥಾ ಉಪ್ಪಿನಂಗಡಿ, ಪುತ್ತೂರು, ಬಿ.ಸಿ ರೋಡು ಮತ್ತು ಬಜಾಲ್‌ಗೆ ತೆರಳಲಿದೆ. ಈ ಸ್ಥಳಗಳಲ್ಲಿ ನ್ಯಾಯವಾದಿ ಬಿ.ಎಂ. ಭಟ್, ರಂಗಕರ್ಮಿ ಐಕೆ ಬೊಳುವಾರು, ಓಸ್ವಾಲ್ಡ್ ಡಿಸೋಜ ಮತ್ತು ಡಾ. ಕೃಷ್ಣಪ್ಪ ಕೊಂಚಾಡಿ ಮಾತನಾಡಲಿದ್ದಾರೆ. ಸೆ.8ರಂದು ವಾಮಂಜೂರು, ಗುರುಪುರ ಕೈಕಂಬ, ಮೂಡಬಿದ್ರೆ, ಮುಲ್ಕಿ, ಸುರತ್ಕಲ್ ಮತ್ತು ಬೆಂಗರೆಗೆ ಜಾಥಾ ಸಾಗಲಿದೆ.

ಇಲ್ಲಿ ಸುನಿಲ್ ಕುಮಾರ್ ಬಜಾಲ್, ಯಾದವರ ಶೆಟ್ಟಿ, ವಿದ್ದು ಉಚ್ಚಿಲ್, ವಸಂತ ಆಚಾರಿ, ದಯಾನಂದ ಶೆಟ್ಟಿ, ಡಾ. ಗಣನಾಥ ಎಕ್ಕಾರ್, ಮುನೀರ್ ಕಾಟಿಪಳ್ಳ ಮತ್ತು ರಜೀಸ್ ಕಾಸರಗೋಡು ಮಾತನಾಡಲಿದ್ದಾರೆ. ಸೆ.9ರಂದು ಜಾಥಾವು ಮುಡಿಪು, ದೇರ್ಲಕಟ್ಟೆ, ಉಳ್ಳಾಲ ಅಬ್ಬಕ್ಕ ಸರ್ಕಲ್, ಉಳ್ಳಾಲ ಮಾಸ್ತಿಕಟ್ಟೆ ಮತ್ತು ತೊಕ್ಕೊಟ್ಟುವಿಗೆ ತೆರಳಲಿದೆ. ಈ ಸಂದರ್ಭದಲ್ಲಿ ಡಾ. ಶಿವರಾಮ ಶೆಟ್ಟಿ ಮತ್ತು ಡಾ. ಇಸ್ಮಾಯಿಲ್ ಮಾತನಾಡಲಿದ್ದಾರೆ. ಬಳಿಕ ಮಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ತನಕ ಯುವಜನರ ಮೆರವಣಿಗೆ ನಡೆಯಲಿದೆ. ಡಿವೈಎಫ್‌ಐ ಕೇಂದ್ರ ಸಮಿತಿ ಸದಸ್ಯರಾದ ಎಂ.ಎಲ್.ಸಿ ವಿಜಿನ್ ಕಣ್ಣೂರು ಸಮಾರೋಪ ಭಾಷಣ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಡಿವೈಎಫ್‌ಐ ಕಾರ್ಯದರ್ಶಿ ಬಸವರಾಜ್ ಪೂಜಾರ್, ಪ್ರೊ. ಫಣಿರಾಜ್ ಅತಿಥಿಗಳಾಗಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ವಿದ್ಯಾರ್ಥಿ ಮುಖಂಡ ವಿನುಶ್ ರಮಣ್, ತಾಲೂಕು ಅಧ್ಯಕ್ಷ ಅಭಿಷೇಕ್ ಮತ್ತು ಹಿರಿಯ ಮುಖಂಡ ನ್ಯಾಯವಾದಿ ಪಿ.ಕೆ. ಸತೀಶನ್ ಉಪಸ್ಥಿತರಿದ್ದರು.


