ಹಿಂದೂ ಯುವಕ ಮುಸ್ಲಿಂ ಯುವತಿಯನ್ನು ಮದುವೆಯಾದರೆ ಯುವಕನಿಗೆ 5 ಲಕ್ಷ ರೂ. ಬಹುಮಾನ : ಶಾಸಕ ಬಸನಗೌಡ ಪಾಟೀಲ್ ಹೇಳಿಕೆಗೆ ದ.ಕ ಮುಸ್ಲಿಂ ಯುವಜನ ಪರಿಷತ್ ಖಂಡನೆ

ಪುತ್ತೂರು: ಮುಸ್ಲಿಂ ಯುವತಿಯನ್ನು ಹಿಂದೂ ಯುವಕ ಮದುವೆಯಾದರೆ ಅಂಥ ಯುವಕನಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿರುವುದು ಖಂಡನೀಯ ಎಂದು ದಕ್ಷಿಣ ಕನ್ನಡ ಮುಸ್ಲಿಂ ಯುವಜನ ಪರಿಷತ್ ಹೇಳಿದೆ.

ಈ ಕುರಿತು ದಕ್ಷಿಣ ಕನ್ನಡ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಪುತ್ತೂರಿನ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಮಾತನಾಡಿ, ಮುಸ್ಲಿಂ ಹೆಣ್ಣು ಮಕ್ಕಳ ಮದುವೆ ಬಗ್ಗೆ ಅವರ ಅಪ್ಪ ಅಮ್ಮ, ಜಮಾತ್ ನವರು ಚಿಂತಿಸುತ್ತಾರೆ. ಯತ್ನಾಳ್ ಅವರಿಗೆ ಈ ಚಿಂತೆ ಬೇಡ.

ಮುಸ್ಲಿಂ ಯುವತಿಯನ್ನು ಮದುವೆಯಾದ ಹಿಂದೂ ಹುಡುಗರಿಗೆ 5 ಲಕ್ಷ ನೀಡುವ ಬದಲು, ಹಿಂದೂ ಸಮಾಜದಲ್ಲೇ ಮದುವೆಯಾಗದೆ ಉಳಿದಿರುವ ಹೆಣ್ಣು ಮಕ್ಕಳ ಮದುವೆ ಮಾಡಿಸಲಿ. ಪುತ್ತೂರಿನಲ್ಲಿ ಬಿಜೆಪಿ ಮುಖಂಡನ ಮಗನೇ ಯುವತಿಗೆ ಮಗು ನೀಡಿ ಈಗ ಮೋಸ ಮಾಡಿದ್ದಾನೆ. ಮೊದಲು ಯತ್ನಾಳ್ ಮುಂದೆ ನಿಂತು ಆ ಯುವಕನ ಜತೆ ಸಂತ್ರಸ್ತ ಯುವತಿಯ ಮದುವೆ ಮಾಡಲಿ.

ಬಿಜೆಪಿಯಲ್ಲಿ ಚಲಾವಣೆಯಲ್ಲಿ ಇಲ್ಲದ ನಾಣ್ಯದಂತಾಗಿರುವ ಯತ್ನಾಳ್ ಅವರು ಈಗ ಪಕ್ಷದ ನಾಯಕ ಗಮನ ಸೆಳೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಧರ್ಮಸ್ಥಳ ಪ್ರಕರಣದಲ್ಲಿ ದೂರು ನೀಡುರುವ ಅನಾಮಿಕ ವ್ಯಕ್ತಿ ಮುಸ್ಲಿಂ ಸಮಾಜಕ್ಕೆ ಸೇರಿದವನು ಎಂದು ಬಿಜೆಪಿ ಮುಖಂಡ ಆರ್. ಅಶೋಕ್ ಸುಳ್ಳು ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಪಿಎ?ಐ ಕೈವಾಡ ಇದೆ ಅಶ್ವತ್ಥ ನಾರಾಯಣ ಹೇಳಿದ್ದಾರೆ. ನಿಷೇಧಿತ ಸಂಘಟನೆ ಪಿಎಫ್ಐ ಇರುವಿಕೆ ಬಗ್ಗೆ ಅವರಿಗೆ ಗೊತ್ತಿದ್ದರೆ, ಅವರದೇ ಸರಕಾರದ ಮೂಲಕ ಕ್ರಮ ಜರುಗಿಸಲಿ. ಈಗ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರು ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ ಎಂದರು.

ಧರ್ಮಸ್ಥಳದ ಯಾವುದೇ ಪ್ರಕರಣದಲ್ಲೂ ಮುಸ್ಲಿಮರ ಪಾತ್ರವಿಲ್ಲ. ಮುಸ್ಲಿಮರು ದೂರು ನೀಡಿದ್ದೂ ಅಲ್ಲ. ಮುಸ್ಲಿಂ ಧರ್ಮಗುರುಗಳು ಯಾವುದೇ ಹೇಳಿಕೆ ಕೂಡ ನೀಡಿಲ್ಲ. ಹೀಗಿದ್ದರೂ ಮುಸ್ಲಿಂ ಸಮುದಾಯದ ಹೆಸರು ಎಳೆದು ತರುವುದು ಯಾಕೆ ಎಂದವರು ಪ್ರಶ್ನಿಸಿದರು.

ದಕ್ಷಿಣ ಕನ್ನಡ ಮುಸ್ಲಿಂ ಯುವಜನ ಪರಿಷತ್ ನ ಕೋಶಾಧಿಕಾರಿ ಅಶ್ರಫ್ ಬಾವು ಪಡೀಲ್, ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಹಂಝ ಕಬಕ, ನೌಶದ್ ಬೊಳುವಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *