ಪುತ್ತೂರು: ಕೊಳೆರೋಗ ಹಾಗೂ ಹವಾಮಾನ ವೈಪರೀತ್ಯದಿಂದ ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗುತ್ತಿರುವ ಅಡಿಕೆಗೆ ಉಪಬೆಳೆಯಾಗಿ ಕಾಳುಮೆಣಸು ಮತ್ತು ಕಾಫಿ ಬೆಳೆಯ ಬಗ್ಗೆ ಉಚಿತ ಮಾಹಿತಿ ಶಿಬಿರ ಆ.10ರಂದು ಪುತ್ತೂರಿನ ಮುಕ್ರಂಪಾಡಿ ಸುಭದ್ರ ಸಭಾ ಮಂದಿರದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ಭಟ್ ಪಡಾರು ಅವರು ತಿಳಿಸಿದರು.

ಈ ಕುರಿತು ಪುತ್ತೂರಿನ ಪ್ರೆಸ್ ಕ್ಲಬ್ ನ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ದ. ಕ ಮತ್ತು ಕಾಸರಗೋಡು ಜಿಲ್ಲೆಗಳ ಕಾಳುಮೆಣಸು ಹಾಗೂ ಕಾಫಿ ಬೆಳೆಗಾರರ ಒಕ್ಕೂಟದಿಂದ ಈ ಶಿಬಿರ ಹಾಗೂ ಸಮಾವೇಶ ನಡೆಯಲಿದೆ. ಅಡಿಕೆಗೆ ಬಾಧಿಸುತ್ತಿರುವ ಹಳದಿ ರೋಗ, ಎಲೆಚುಕ್ಕಿ ರೋಗ, ಎಳೆ ನಳ್ಳಿ ಉದುರುವಿಕೆಯಂತಹ ಸಮಸ್ಯೆಗಳು, ಅಡಿಕೆ ಕೊಯ್ಯಲು, ಔಷಧ ಸಿಂಪಡಣೆಗೆ ನುರಿತ ಕಾರ್ಮಿಕರ ಅಭಾವಕ್ಕೆ ಪರ್ಯಾಯವಾಗಿ ಕಾಳುಮೆಣಸು, ಕಾಫಿ ಬೆಳೆಗಳತ್ತ ರೈತವರ್ಗ ದೃಷ್ಟಿ ಹಾಯಿಸಿದೆ.

ಬೆಳಿಗ್ಗೆ ಗಂಟೆ 9.30ಕ್ಕೆ ಮಾಹಿತಿ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕ್ಯಾಂಸ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ಕಾಳುಮೆಣಸು ಬೆಳೆಗಾರರ ಸಂಘದ ವಿಜ್ಞಾನಿ ಡಾ. ವೇಣುಗೋಪಾಲ್ ಸಮಗ್ರ ಕಾಳುಮೆಣಸು ಬೆಳೆಯುವ ಮಾಹಿತಿ ಮತ್ತು ಸಂರಕ್ಷಣಾ ವಿಧಾನದ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ. 7 ಬಿನ್ ಟೀಮ್ನ ಮುಖ್ಯಸ್ಥ ಡಾ. ಎಚ್ ಎಸ್ ಧರ್ಮರಾಜ್ ಸಕಲೇಶಪುರ ಅವರು ಕಾಫಿ ಮತ್ತು ಕಾಳುಮೆಣಸಿಗೆ ನೀಡುವ ಪೋಷಕಾಂಶಗಳ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ.

ಇಂದೋರ್ನ ಶ್ರೀಸದ್ದಿ ಅಗ್ರಿ ಕಂಪೆನಿಯ ಮುಖ್ಯಸ್ಥ ಪೆರುವೊಡಿ ನಾರಾಯಣ ಭಟ್ ಅವರು ಅಡಿಕೆ ಬೆಳೆಯುವ ವಿಧಾನ ಮತ್ತು ಪೋಷಕಾಂಶಗಳ ಸಮಗ್ರ ಮಾಹಿತಿ ನೀಡಲಿದ್ದಾರೆ. ಅಡಿಕೆ ಮತ್ತು ಕಾಳುಮೆಣಸು ಕೃಷಿಕ ಸುರೇಶ್ ಬಲ್ನಾಡು, ಅರವಿಂದ ಮುಳ್ಳಂಕೊಚ್ಚಿ ಆಲಂಕಾರು, ಪ್ರಗತಿಪರ ಕಾಳುಮೆಣಸು ಕೃಷಿಕ ಡಾ. ವೇಣುಗೋಪಾಲ್ ಕಳೆಯತೋಡಿ, ಧೂಪದ ಮರದಲ್ಲಿ ಕಾಳುಮೆಣಸು ಕೃಷಿ ಮಾಡಿದ ಸಾಧಕ ಅನಂತರಾಮಕೃಷ್ಣ ಪಳ್ಳತ್ತಡ್ಕ, ಅಡಿಕೆಮರ ಏರುವ ಯಂತ್ರವನ್ನು ಅವಿಷ್ಕರಿಸಿದ ಕೋಮಲೆ ಗಣಪತಿ ಭಟ್, ಕಾಳುಮೆಣಸು ಕಸಿ ಕಟ್ಟಿ ಬೆಳೆಸಿದ ಅನುಭವಿ ಸ್ವಪ್ನಾ ಸೇಡಿಯಾಪು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಕಾಳುಮೆಣಸು ಮತ್ತು ಕಾಫಿ ಬೆಳೆಯಲ್ಲಿ ಪ್ರಗತಿಪರ ಕೃಷಿಕರಾಗಿರುವ ಅಜಿತ್ ಪ್ರಸಾದ್ ರೈ ದಂಪತಿ ಮತ್ತು ಪೆರುವೋಡಿ ನಾರಾಯಣ ಭಟ್ ಅವರನ್ನು ಸನ್ಮಾನಿಸಲಾಗುವುದು ಎಂದ ಅವರು ಕಾರ್ಯಾಗಾರದಲ್ಲಿ ಹಲವು ಹಣ್ಣುಗಳ ಗಿಡಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಎಸ್.ಆರ್.ಕೆ.ಲ್ಯಾಡರ್ ಅವರಿಂದ ಕಾಳುಮೆಣಸು ಪ್ರತ್ಯೇಕಿಸುವ ಯಂತ್ರ ಮತ್ತು ಆಕರ್ಷನ್ ಇಂಡಸ್ಟ್ರೀಸ್ ಅವರಿಂದ ಕಾಳುಮೆಣಸು ಬೆಳೆಯುವ ಸಿಮೆಂಟ್ ಕಂಬಗಳ ಮಳಿಗೆಗಳು ಸಹಿತ ಹಲವಾರು ಉಪಕರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿ ಯಲ್ಲಿ ಒಕ್ಕೂಟದ ಸದಸ್ಯರಾದ ವಕೀಲರ ಗೋವಿಂದ ಭಟ್ ಬಾಯಾಡಿ, ಕಾಳುಮೆಣಸು ಕೃಷಿಕ ಅಜಿತ್ ಪ್ರಸಾದ್ ರೈ, ಸೇಡಿಯಾಪು ಜನಾರ್ದನ ಭಟ್, ಒಕ್ಕೂಟದ ಕಾರ್ಯದರ್ಶಿ ಅಭಿಜಿತ್ ಬಿ ಪುತ್ತೂರು ಉಪಸ್ಥಿತರಿದ್ದರು.


