ಮಂಗಳೂರು: ಜನರಿಗೆ ಗೌರವಯುತವಾಗಿ ಬದುಕುವ ಗ್ಯಾರಂಟಿ ಕೊಡಿ ಎಂದು ರಾಜ್ಯ ಕಾಂಗ್ರೆಸ್ ಸರಕಾರವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಆಗ್ರಹಿಸಿದ್ದಾರೆ.

ಬಂಟ್ವಾಳದಲ್ಲಿ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿಯಲ್ಲಿ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ಇಲ್ಲಿನ ಜನರಿಗೆ ಮಿಕ್ಕ ಎಲ್ಲಾ ಗ್ಯಾರೆಂಟಿ ಗಳಿಗಿಂತ ಹೊರತಾಗಿ ಮೊದಲು ಗೌರವಯುತವಾಗಿ, ನೆಮ್ಮದಿಯಿಂದ ಬದುಕುವ ಗ್ಯಾರಂಟಿಯನ್ನು, ಶಾಂತಿಯುತ ವಾತಾವರಣವನ್ನು ನಿರ್ಮಿಸಿ ಕೊಡಬೇಕು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಹಿತಕರ, ಕೋಮು ಸಂಘರ್ಷ ಹುಟ್ಟು ಹಾಕುವಂತಹ ಘಟನೆಗಳು ಜನರ ನೆಮ್ಮದಿಯನ್ನು ಹಾಳುಗೆಡಹಿದೆ.
ಶಾಂತಿಯ ವಾತಾವರಣವನ್ನು ಕೆಡಿಸಿ ಆ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳುವ ಹುನ್ನಾರಗಳ ಭಾಗವಾಗಿ ಇಂತಹ ಘಟನೆಗಳು ಮರುಕಳಿಸುತ್ತಿವೆ.

ಪ್ರತಿಯೊಂದು ಘಟನೆಗಳು ನಡೆದಾಗಲೂ ಅದನ್ನು ಸರಕಾರಕ್ಕೆ ತಲುಪಿಸುವಂಹ ಕೆಲಸ ನಡೆದರೂ ರಾಜ್ಯದ ಗೃಹ ಇಲಾಖೆ ಈ ಬಗ್ಗೆ ಗಮನ ಹರಿಸಿಲ್ಲ.
ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆಗಳು ಒಂದೂ ಈಡೇರಿಲ್ಲ.
ಹಾಗಾಗಿ, ಇನ್ನಾದರೂ ಕರಾವಳಿಯ ಈ ನೆತ್ತರ ರಾಜಕೀಯ ಕೊನೆಯಾಗಬೇಕಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
