Breaking
16 Nov 2026, Mon

ಬೆಂಗಳೂರು–ಮಂಗಳೂರು ಡಬಲ್ ರೈಲು ಮಾರ್ಗಕ್ಕೆ ಕೇಂದ್ರ ರೈಲ್ವೆ ಸಚಿವರ ಒಪ್ಪಿಗೆ: ಕರಾವಳಿಯಲ್ಲಿ ಹೆಚ್ಚಿದ ಸಂತಸ

ಬಂಟ್ವಾಳ: ಬೆಂಗಳೂರು–ಮಂಗಳೂರು ನಡುವಿನ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಡಬಲ್ ರೈಲು ಮಾರ್ಗ ಅಳವಡಿಕೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಒಪ್ಪಿಗೆ ಸೂಚಿಸಿದ್ದು, ಕರಾವಳಿ ಭಾಗದ ಜನತೆಯಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಬೆಂಗಳೂರುದಿಂದ ಮಂಗಳೂರು ಮೂಲಕ ಮಡಗಾಂವ್‌ವರೆಗೆ ಸಂಚರಿಸಲಿರುವ ನೂತನ ವಂದೇ ಮಾತರಂ ರೈಲಿಗೆ ಮಂಗಳೂರು ಜಂಕ್ಷನ್‌ನಲ್ಲಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲಿನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರೂ ಸಚಿವರೊಂದಿಗೆ ಪ್ರಯಾಣಿಸಿ, ಬೆಂಗಳೂರು–ಮಂಗಳೂರು ನಡುವಿನ ರೈಲು ಮಾರ್ಗದ ಮಹತ್ವ, ಡಬಲ್ ಲೈನ್ ಅಳವಡಿಕೆಯ ಅಗತ್ಯತೆ ಹಾಗೂ ಮಾರ್ಗಮಧ್ಯೆ ಎದುರಾಗುವ ಪ್ರಾಕೃತಿಕ ಸವಾಲುಗಳ ಕುರಿತು ಸಚಿವರ ಗಮನ ಸೆಳೆದರು.

ಸಂಸದರ ಮನವಿಗೆ ಸ್ಪಂದಿಸಿದ ಸಚಿವರು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಚರ್ಚಿಸಿ, ಬೆಂಗಳೂರು–ಮಂಗಳೂರು ಡಬಲ್ ಲೈನ್ ಯೋಜನೆಯನ್ನು ರಾಷ್ಟ್ರೀಯ ಮಹತ್ವದ ಯೋಜನೆಯಾಗಿ ಪರಿಗಣಿಸಿ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.

ಯೋಜನೆಯ ಮೊದಲ ಹಂತವಾಗಿ ಮಂಗಳೂರು–ಸುಬ್ರಹ್ಮಣ್ಯ ನಡುವಿನ ಸಮತಟ್ಟಾದ ಪ್ರದೇಶದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸುಬ್ರಹ್ಮಣ್ಯದಿಂದ ಸಕಲೇಶಪುರದವರೆಗಿನ ಘಾಟ್ ಪ್ರದೇಶದಲ್ಲಿ ಎದುರಾಗುವ ಭೌಗೋಳಿಕ ಹಾಗೂ ಪ್ರಾಕೃತಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ವಿನೂತನ ಕಾರ್ಯಯೋಜನೆ ರೂಪಿಸಿ ಅಗತ್ಯ ಪರಿಹಾರ ಕಂಡುಕೊಳ್ಳುವಂತೆ ಸಚಿವರು ಸೂಚಿಸಿದ್ದಾರೆ.

ಬೆಂಗಳೂರು ಮತ್ತು ಮಂಗಳೂರು ನಡುವಿನ ಡಬಲ್ ರೈಲು ಮಾರ್ಗ ನಿರ್ಮಾಣದಿಂದ ಉಭಯ ನಗರಗಳ ನಡುವಿನ ಸಂಪರ್ಕ ವ್ಯವಸ್ಥೆ ಸುಧಾರಿಸುವುದರ ಜೊತೆಗೆ ವ್ಯಾಪಾರ, ಉದ್ಯಮ, ಪ್ರವಾಸೋದ್ಯಮ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ವೇಗ ದೊರೆಯಲಿದೆ. ಅಲ್ಲದೆ, ಕರಾವಳಿ ಮತ್ತು ಮಲೆನಾಡು ಭಾಗಗಳ ಸಾಂಸ್ಕೃತಿಕ ಸಂಬಂಧಗಳಿಗೂ ಹೊಸ ಬಲ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಕರಾವಳಿ ಜನತೆಯ ಬಹುಕಾಲದ ಬೇಡಿಕೆಯಾಗಿರುವ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಕೇಂದ್ರ ರೈಲ್ವೆ ಸಚಿವರೊಂದಿಗೆ ನಿರಂತರ ಸಂಪರ್ಕ ಬೆಳೆಸಿ ಪ್ರಯತ್ನಿಸಿದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಅವರು ಮಂಗಳೂರು ಭಾಗದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *