Breaking
16 Nov 2026, Mon

ಸಿದ್ದಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ: ಪುಟಾಣಿಗಳಿಗೆ ಬಹುಮಾನ ವಿತರಣೆ

ಸಿದ್ದಕಟ್ಟೆ: ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಪುಟಾಣಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಿಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಅವರು ಬಹುಮಾನ ವಿತರಿಸಿ ಮಾತನಾಡಿ, ಅಂಗನವಾಡಿಯ ಪುಟಾಣಿ ಮಕ್ಕಳು ದೇವರಿಗೆ ಸಮಾನ. ಈ ವಯಸ್ಸಿನಲ್ಲಿ ಮಕ್ಕಳು ಏನೇ ಮಾಡಿದರೂ ಪೋಷಕರು ಅವರನ್ನು ಬೆದರಿಸದೆ ಪ್ರೀತಿ ಮತ್ತು ವಾತ್ಸಲ್ಯದಿಂದ ಕಾಣಬೇಕು. ಇದರಿಂದ ಮಕ್ಕಳು ತಂದೆ-ತಾಯಿಯೊಂದಿಗೆ ನಿರಂತರ ಪ್ರೀತಿ ಹಾಗೂ ಆತ್ಮೀಯತೆಯಿಂದ ಇರಲು ಸಾಧ್ಯವಾಗುತ್ತದೆ ಎಂದರು.

ಸಿದ್ದಕಟ್ಟೆಯ ಉದ್ಯಮಿ ರೋ/ನೋಣಯ ಶೆಟ್ಟಿಗಾರ್ ಶುಭ ಹಾರೈಸಿದರು. ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿಯ ಸದಸ್ಯ ಹಾಗೂ ವೈಭವ್ ಮೆಡಿಕಲ್ ಮಾಲಕ ಸಚ್ಚಿದಾನಂದ ಭಟ್ ಅವರು ಕೊಡಮಾಡಿದ ಪ್ರೋಟೀನ್ ಕಿಟ್‌ಗಳನ್ನು ಅಂಗನವಾಡಿ ಕಾರ್ಯಕರ್ತೆ ಸರಸ್ವತಿಯವರಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯರಾದ ಅಶೋಕ್ ಆಚಾರ್ಯ, ಅಂಗನವಾಡಿ ಸಹಾಯಕಿ ಶಾರದಾ, ಮಕ್ಕಳ ಪೋಷಕರು ಹಾಗೂ ಬಾಲವಿಕಾಸ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *