Breaking
16 Nov 2026, Mon

ಬೆಂಜನಪದವು: ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳೊಂದಿಗೆ ಕುಲಾಲ ಯುವ ವೇದಿಕೆಯಿಂದ ಮಕ್ಕಳ ದಿನಾಚರಣೆ ಸಂಭ್ರಮ

ಬಂಟ್ವಾಳ: ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ.), ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯನ್ನು ಬೆಂಜನಪದವಿನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.

ಮಕ್ಕಳ ದಿನಾಚರಣೆಯ ಅಂಗವಾಗಿ ವಿವಿಧ ಮನರಂಜನಾ ಕಾರ್ಯಕ್ರಮಗಳು, ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಹಾಗೂ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉದ್ಯಮಿ ಬೂಬ ಸಾಲ್ಯಾನ್ ಮೊಗರ್ನಾಡು, ಬೂಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ರಾರಾಸಂ ಫೌಂಡೇಶನ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ, ಪುರುಷೋತ್ತಮ್ ಹಾಲಾಡಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯ ಪ್ರಸಾದ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೇವಲ 2 ವರ್ಷ 9 ತಿಂಗಳ ಪ್ರಾಯದಲ್ಲೇ ಐದು ಸಂಸ್ಕೃತ ಶ್ಲೋಕಗಳನ್ನು ಕಂಠಪಾಠ ಮಾಡಿ, ಕನ್ನಡ ಹಾಗೂ ತುಳು ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸಾಧನೆ ದಾಖಲಿಸಿರುವ ಪುಟಾಣಿ ಪ್ರದ್ಯ ಕುಲಾಲ್ ಅವರನ್ನು ಅಭಿನಂದಿಸಲಾಯಿತು. ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾರಾಸಂ ಫೌಂಡೇಶನ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಕ್ಕಳೊಂದಿಗೆ ಬೆರೆತು ಅವರ ಸಂತೋಷದಲ್ಲಿ ಭಾಗಿಯಾಗುವ ಮೂಲಕ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಯಿತು.

ಸುಕುಮಾರ ಬಂಟ್ವಾಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಿತೇಶ್ ಪಲ್ಲಿಕಂಡ ವಂದಿಸಿದರು. ಹೆಚ್.ಕೆ. ನೈನಾಡ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *