Breaking
16 Nov 2026, Mon

ಮಜಿ ವೀರಕಂಭ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ: ಮಕ್ಕಳೊಂದಿಗೆ ಮಕ್ಕಳಾಗಿ ಸಂಭ್ರಮಿಸಿದ ಶಿಕ್ಷಕರು

ಕಲ್ಲಡ್ಕ: ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ.14ರಂದು ಮಕ್ಕಳ ದಿನಾಚರಣೆಯನ್ನು ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿ.ಸಿ.ರೋಡ್‌ನ ಮಿನಿ ಲೈಬ್ರರಿ ರಿಕ್ಷಾ ಖ್ಯಾತಿಯ ಚಾಲಕ ಹಾಗೂ ಮಾಲಕ ಸುಶಾಂತ್ ಅವರು, ಮಕ್ಕಳು ದೇಶದ ಸಂಪತ್ತು. ಸಂಸ್ಕಾರದ ಜೊತೆಗೆ ಶಿಸ್ತು, ಮಾನವೀಯತೆ, ಸಹಕಾರ ಹಾಗೂ ದೇಶಪ್ರೇಮದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರ ಆತ್ಮವಿಶ್ವಾಸವನ್ನು ಹೊರಹೊಮ್ಮಿಸಲು ಸೂಕ್ತ ವೇದಿಕೆ ಕಲ್ಪಿಸುವುದು ಇಂದಿನ ಶಿಕ್ಷಣದ ಉದ್ದೇಶವಾಗಿದೆ ಎಂದರು.

ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿಜ್ಞಾನಿ, ಶಿಕ್ಷಕ, ವೈದ್ಯ, ಕ್ರೀಡಾಪಟು ಅಥವಾ ದೇಶವನ್ನು ಮುನ್ನಡೆಸುವ ನಾಯಕರಾಗಬಹುದು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಉತ್ತಮ ಮನುಷ್ಯರಾಗಬೇಕು. ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಮಾನವೀಯತೆ, ಪ್ರೀತಿ, ವಿನಯ ಹಾಗೂ ಸಂಸ್ಕಾರವನ್ನು ಮರೆಯಬಾರದು. ಸ್ವಚ್ಛತೆಯೂ ಜೀವನದಲ್ಲಿ ಅತ್ಯಂತ ಮುಖ್ಯವಾದ ಮೌಲ್ಯವಾಗಿದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಚಿತ್ರಕಲಾ ಶಿಕ್ಷಕರಾದ ತಿಲಾಕ್ಷ ಹಾಗೂ ಕೀರ್ತನಾ ದಂಪತಿಗಳು ರಾಜ್ಯಮಟ್ಟದ ವರ್ಣೋತ್ಸವ-2026 ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಚಿತ್ರಕಲೆ ಕೇವಲ ಬಣ್ಣಗಳನ್ನು ತುಂಬುವ ಕಲೆಯಲ್ಲ. ಅದು ಮಾನವನ ಭಾವನೆ, ಕಲ್ಪನೆ, ಆಲೋಚನೆ ಹಾಗೂ ಅನುಭವಗಳನ್ನು ಬಣ್ಣಗಳ ಮೂಲಕ ವ್ಯಕ್ತಪಡಿಸುವ ಸೃಜನಶೀಲ ಅಭಿವ್ಯಕ್ತಿಯಾಗಿದೆ. ಮಾತುಗಳಿಂದ ಹೇಳಲಾಗದ ಅನೇಕ ವಿಚಾರಗಳನ್ನು ಚಿತ್ರಗಳ ಮೂಲಕ ಪರಿಣಾಮಕಾರಿಯಾಗಿ ವ್ಯಕ್ತಪಡಿಸಬಹುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಲ್ಲಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಲಾಯಿತು. ದೈಹಿಕ ಶಿಕ್ಷಕ ಇಂದುಶೇಖರ್ ಹಾಗೂ ಶಿಕ್ಷಕ ತೌಸೀಫ್ ಅಹ್ಮದ್ ಅವರು ತರಗತಿವಾರು ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಶಿಕ್ಷಕರು ಮಕ್ಕಳಿಗಾಗಿ ಹಾಡು ರಚಿಸಿ ಹಾಡುವುದರ ಜೊತೆಗೆ ವಿದ್ಯಾರ್ಥಿಗಳೊಂದಿಗೆ ನೃತ್ಯ ಮಾಡುವ ಮೂಲಕ ಮಕ್ಕಳಾಗಿ ಬೆರೆತು ಸಂಭ್ರಮಿಸಿದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಿಹಿ ಹಂಚುವ ಮೂಲಕ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಮಕ್ಕಳ ಮನಸ್ಸಿನಲ್ಲಿ ಸಂತೋಷದ ನೆನಪುಗಳನ್ನು ಮೂಡಿಸಿದ ಈ ಕಾರ್ಯಕ್ರಮವು ಅವರ ಪ್ರತಿಭೆ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಸುಂದರ ವೇದಿಕೆಯಾಯಿತು. ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೆಸ್ ಮಂಡೋನ್ಸಾ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಸಂಗೀತ ಶರ್ಮಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಹ ಶಿಕ್ಷಕರು ಸಹಕರಿಸಿದರು.

Leave a Reply

Your email address will not be published. Required fields are marked *