ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೊಟ್ಟಾರಚೌಕಿಯ ಮಾಲೆಮಾರ್ ಕ್ರಾಸ್ ಬಳಿ ಗುರುವಾರ ರಾತ್ರಿ ಪಿಕಪ್ ವಾಹನದಿಂದ ಕಬ್ಬಿಣದ ಸಲಾಕೆಗಳು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಯಿತು.

ಕಬ್ಬಿಣದ ಸಲಾಕೆಗಳನ್ನು ತುಂಬಿಕೊಂಡು ಸಾಗುತ್ತಿದ್ದ ಪಿಕಪ್ ವಾಹನಕ್ಕೆ ಬೈಕ್ ಏಕಾಏಕಿ ಅಡ್ಡ ಬಂದ ಹಿನ್ನೆಲೆಯಲ್ಲಿ ಚಾಲಕ ಬ್ರೇಕ್ ಹಾಕಿದ್ದಾನೆ. ಈ ವೇಳೆ ವಾಹನದಲ್ಲಿದ್ದ ಕಬ್ಬಿಣದ ಸಲಾಕೆಗಳು ರಸ್ತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ತಿಳಿದುಬಂದಿದೆ.

ಪಿಕಪ್ ವಾಹನದಲ್ಲಿ ನಿಗದಿತ ಮಿತಿಗಿಂತ ಉದ್ದದ ಕಬ್ಬಿಣದ ಸಲಾಕೆಗಳನ್ನು ಸಾಗಿಸಲಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತು.



