ಪದ್ಮುಂಜ: ಬೆಳೆ ವಿಮೆ ನಷ್ಟ ಪರಿಹಾರದಲ್ಲಿ ರೈತರಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಹಾಗೂ ನ್ಯಾಯಯುತ ಹಕ್ಕುಗಳಿಗಾಗಿ ಅಕ್ಟೋಬರ್ 9ರಂದು ಮಂಗಳೂರಿನ ಟೌನ್‌ಹಾಲ್‌ನಲ್ಲಿ ಬೃಹತ್ ಹಕ್ಕೊತ್ತಾಯ ಸಭೆ ಹಾಗೂ ಪ್ರತಿಭಟನೆ ನಡೆಯಲಿದೆ.

“ನಮ್ಮ ಹಕ್ಕು, ನಮ್ಮ ಹೋರಾಟ” ಎಂಬ ಧ್ಯೇಯದೊಂದಿಗೆ ಬೆಳಗ್ಗೆ 10.30ಕ್ಕೆ ಟೌನ್‌ಹಾಲ್‌ನಲ್ಲಿ ಹಕ್ಕೊತ್ತಾಯ ಸಭೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವಂತೆ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮನವಿ ಮಾಡಿದೆ.

ಪ್ರತಿಭಟನೆಯಲ್ಲಿ ಭಾಗವಹಿಸುವ ಕಣಿಯೂರು, ಬಂದಾರು ಹಾಗೂ ಮೊಗ್ರು ಗ್ರಾಮ ವ್ಯಾಪ್ತಿಯ ರೈತರಿಗೆ ಮಾತ್ರ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಣಿಯೂರು ಗ್ರಾಮದ ಪದ್ಮುಂಜ ಸಿ.ಎ. ಬ್ಯಾಂಕ್ ಬಳಿಯಿಂದ ಬೆಳಗ್ಗೆ 8.30ಕ್ಕೆ ಬಸ್ ಹೊರಡಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಬೆಳೆ ವಿಮೆ ಪರಿಹಾರದಲ್ಲಿ ರೈತರಿಗೆ ಆಗಿರುವ ಅನ್ಯಾಯದ ವಿರುದ್ಧ ನಡೆಯುವ ಈ ಹೋರಾಟದಲ್ಲಿ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಂಘ ಮನವಿ ಮಾಡಿದೆ.




