Breaking
8 Oct 2026, Thu

ಪುಂಜಾಲಕಟ್ಟೆ – ಚಾರ್ಮಾಡಿ ರಸ್ತೆಯಲ್ಲಿ ಟೋಲ್‌ಗೇಟ್ ನಿರ್ಮಾಣಕ್ಕೆ ವಿರೋಧ: ಶೇಖರ್ ಲಾಯಿಲ

ಬೆಳ್ತಂಗಡಿ: ತಾಲೂಕಿನ ಪುಂಜಾಲಕಟ್ಟೆ – ಚಾರ್ಮಾಡಿ ರಸ್ತೆಯಲ್ಲಿ ಟೋಲ್‌ಗೇಟ್ ನಿರ್ಮಾಣ ಮಾಡುವ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬೆಳ್ತಂಗಡಿ ತಾಲೂಕಿನ ಜನರನ್ನು ಮೂರ್ಖರನ್ನಾಗಿಸುವ ಕೆಲಸ ಮಾಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಆರೋಪಿಸಿದ್ದಾರೆ.

ಪ್ರತಿ 60 ಕಿ.ಮೀ. ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಚತುಷ್ಪಥ ರಸ್ತೆಯಲ್ಲಿ ಟೋಲ್‌ಗೇಟ್ ಇರಬೇಕಾದ ನಿಯಮವಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಪುಂಜಾಲಕಟ್ಟೆ – ಚಾರ್ಮಾಡಿ ರಸ್ತೆಯಲ್ಲಿ ಟೋಲ್‌ಗೇಟ್ ನಿರ್ಮಿಸುವ ಮೂಲಕ ಜನರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡಲು ಮುಂದಾಗಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗಷ್ಟೇ ತಾಲೂಕಿನಾದ್ಯಂತ ಪ್ರವಾಸ ನಡೆಸಿ ಹಲವು ಅಭಿವೃದ್ಧಿ ವಿಚಾರಗಳ ಕುರಿತು ಮಾತನಾಡಿ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಸಂಸದರು, ಇದೀಗ ವಾರದೊಳಗೆ ಅದೇ ತಾಲೂಕಿನ ಜನರ ಮೇಲೆ ಹೊರೆ ಹಾಕುವ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ಶೇಖರ್ ಲಾಯಿಲ ಟೀಕಿಸಿದ್ದಾರೆ.

ಬ್ರಹ್ಮರಕೋಟ್ಲು ಅಕ್ರಮ ಟೋಲ್‌ಗೇಟ್ ತೆರವುಗೊಳಿಸಲು ಸಂಸದರು ಮುತುವರ್ಜಿ ವಹಿಸಬೇಕಾದ ಸಂದರ್ಭದಲ್ಲಿ, ರಸ್ತೆಯಲ್ಲಿ ಟೋಲ್ ವಸೂಲಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವಂತೆ ಕಾಣುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಯಾವುದೇ ಕಾರಣಕ್ಕೂ ಬೆಳ್ತಂಗಡಿ ತಾಲೂಕಿನಲ್ಲಿ ಟೋಲ್‌ಗೇಟ್ ನಿರ್ಮಿಸಲು ಅವಕಾಶ ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ರಾಜಕೀಯ ಹಾಗೂ ಸಾಮಾಜಿಕ ಸಂಘಟನೆಗಳ ನೇತೃತ್ವದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಶೇಖರ್ ಲಾಯಿಲ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *