Breaking
7 Oct 2026, Wed

ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ

ಮಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತನನ್ನು ಪುತ್ತೂರಿನ ನೆಲ್ಯಾಡಿ ಗ್ರಾಮದ, ಪ್ರಸ್ತುತ ನೆಕ್ಕಿಲಾಡಿ ಗ್ರಾಮದಲ್ಲಿ ವಾಸವಾಗಿರುವ ಮೊಹಮ್ಮದ್ ಮುಸ್ತಾಫಾ ಅಲಿಯಾಸ್ ಮುಸ್ತಾಫಾ (36) ಎಂದು ಗುರುತಿಸಲಾಗಿದೆ.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅ.ನಂ. 59/2013ರ ಕಲಂ 394 ಜೊತೆಗೆ 34 ಐಪಿಸಿ ಹಾಗೂ ಮಂಗಳೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಎಸ್.ಸಿ. ನಂ.65/2013ರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಶಿಕ್ಷೆಯಾಗಿತ್ತು. ಈ ಶಿಕ್ಷಾ ಆದೇಶದ ವಿರುದ್ಧ ಆರೋಪಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದ್ದನು.

ಅಪೀಲು ದಾಖಲಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ, ಆರೋಪಿಯನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಉಚ್ಚ ನ್ಯಾಯಾಲಯದಿಂದ ಬಂಧನ ವಾರೆಂಟ್ ಜಾರಿಯಾಗಿತ್ತು.

ಅ.6ರಂದು ಬೆಳಗ್ಗೆ ಆರೋಪಿಯ ಪ್ರಸ್ತುತ ವಾಸದ ವಿಳಾಸವನ್ನು ಪೊಲೀಸರು ಪತ್ತೆಹಚ್ಚಿದ್ದು, ಬಳಿಕ ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ವಿಜಯ ಕ್ರಾಂತಿ ಅವರ ನಿರ್ದೇಶನದಂತೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕ ಡಿ.ಆರ್. ಮಂಜಪ್ಪ ಅವರ ನೇತೃತ್ವದಲ್ಲಿ ಪಿಎಸ್‌ಐ ಅರುಣ್ ಕುಮಾರ್ ಡಿ. ಹಾಗೂ ಸಿಬ್ಬಂದಿ ದಸ್ತಗಿರಿ ಕಾರ್ಯಾಚರಣೆ ನಡೆಸಿದರು.

ಕಾರ್ಯಾಚರಣೆಯಲ್ಲಿ ಹೆಡ್ ಕಾನ್ಸ್ಟೇಬಲ್‌ಗಳಾದ ಕಮಲಾಕ್ಷ, ಮೆಲ್ವಿನ್ ಪಿಂಟೊ, ಹನುಮರೆಡ್ಡಿ, ಕಾನ್ಸ್ಟೇಬಲ್‌ಗಳಾದ ರಮೇಶ್, ಬಿರೇಂದ್ರ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *