Breaking
7 Oct 2026, Wed

ಪಣಂಬೂರು ಸಮುದ್ರದಲ್ಲಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಹೆಜಮಾಡಿ ಕೋಡಿಯಲ್ಲಿ ಪತ್ತೆ

ಮಂಗಳೂರು: ಪಣಂಬೂರಿನ ಕೂರಿಕಟ್ಟ ಸಮುದ್ರ ಕಿನಾರೆಯಲ್ಲಿ ಅಲೆಗಳ ರಭಸಕ್ಕೆ ಸಿಲುಕಿ ನಾಪತ್ತೆಯಾಗಿದ್ದ 14 ವರ್ಷದ ಬಾಲಕ ಶ್ರೇಯಸ್ ಎಸ್. ಕುಂಬಾರನ ಮೃತದೇಹ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿ ಶಾಂಭವಿ ನದಿ ತೀರದಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದೆ.

ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ರೆಂಕೆದಗುತ್ತು ನಿವಾಸಿಯಾಗಿದ್ದ ಶ್ರೇಯಸ್, ದಸರಾ ಹಬ್ಬದ ಹಿನ್ನೆಲೆಯಲ್ಲಿ ಅಕ್ಟೋಬರ್ 4ರಂದು ಸ್ನೇಹಿತರೊಂದಿಗೆ ಮಂಗಳೂರಿಗೆ ಬಂದಿದ್ದ. ಬಳಿಕ ಪಣಂಬೂರಿನ ಕೂರಿಕಟ್ಟ ಸಮುದ್ರ ಕಿನಾರೆಗೆ ತೆರಳಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ವೇಳೆ ಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ.

ಬಾಲಕನಿಗಾಗಿ ಕರಾವಳಿ ಭಾಗದಲ್ಲಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿತ್ತು. ಈ ನಡುವೆ ಅಕ್ಟೋಬರ್ 6ರಂದು ಸಂಜೆ ಹೆಜಮಾಡಿ ಕೋಡಿ ಶಾಂಭವಿ ನದಿ ತೀರದಲ್ಲಿ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ಶ್ರೇಯಸ್ ಅವರ ತಂದೆ ಸೇಸಪ್ಪ ಗುರುತಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *