ಬಂಟ್ವಾಳ: ರಾಜ್ಯದಲ್ಲಿ ರೈತರ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ಸ್ಪಂದನೆ ನೀಡುತ್ತಿಲ್ಲ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಕಂಡುಬಂದಿದ್ದು, ಗ್ರಾಮೀಣ ಭಾಗದ ಹಲವು ರೈತರಿಗೆ ಅನ್ಯಾಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಆರೋಪಿಸಿದರು.

ಬಿ.ಸಿ.ರೋಡಿನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರು ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟ ಅನುಭವಿಸಿದ್ದಾರೆ. ಭತ್ತದ ಬೆಳೆ ಮಳೆ ಕೊರತೆ ಹಾಗೂ ಹಳದಿ ರೋಗದಿಂದ ಹಾನಿಗೀಡಾಗಿದ್ದು, ರೈತರಿಗೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

‘ಪ್ರಜಾಸೇವೆ ಆಂದೋಲನ’ದ ಹೆಸರಿನಲ್ಲಿ ಪ್ರಚಾರ ಪಡೆಯುತ್ತಿರುವ ರಾಜ್ಯ ಸರ್ಕಾರ ರಸ್ತೆ ಹೊಂಡಗಳನ್ನು ಮುಚ್ಚುವುದರ ಜೊತೆಗೆ ಕೃಷಿ ಹೊಂಡ ಹಾಗೂ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೂ ಅಗತ್ಯ ಅನುದಾನ ಒದಗಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಟೀಕಿಸಿದರು.
ಪುಂಜಾಲಕಟ್ಟೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ವಸತಿ ಶಾಲೆಗೆ ಈಗಾಗಲೇ 15 ಎಕರೆ ಜಮೀನು ಮಂಜೂರಾಗಿದ್ದು, ಅಲ್ಲಿ ಜ್ಞಾನಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಬೆಳೆ ನಷ್ಟ ಅನುಭವಿಸಿರುವ ರೈತರ ಸಮಸ್ಯೆಗಳ ಕುರಿತು ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ವಿಧಾನಸಭೆಯಲ್ಲಿ ಧ್ವನಿ ಎತ್ತಿ, ಸೂಕ್ತ ಪರಿಹಾರ ಒದಗಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ತುಂಗಪ್ಪ ಬಂಗೇರ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ಮತ್ತು ಕಜೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕರುಣೇಂದ್ರ ಪೂಜಾರಿ, ಸತೀಶ ಪೂಜಾರಿ ಕಜೆಕಾರು, ತಾರನಾಥ ಕಜೆಕಾರು ಹಾಗೂ ಯಶವಂತ ಕಜೆಕಾರು ಉಪಸ್ಥಿತರಿದ್ದರು.


