Breaking
7 Oct 2026, Wed

ಬಂಟ್ವಾಳದಲ್ಲಿ ಅರ್ಹ ಮತದಾರರ ಹೆಸರು ಅಳಿಸುವ ಆರೋಪ; ಸುಳ್ಳು ಅರ್ಜಿದಾರರ ವಿರುದ್ಧ ಕ್ರಮಕ್ಕೆ ರಮಾನಾಥ ರೈ ಆಗ್ರಹ

ಬಂಟ್ವಾಳ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹೆಸರಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಅಳಿಸುವ ಉದ್ದೇಶದಿಂದ ಫಾರಂ–7ರಲ್ಲಿ ಸುಳ್ಳು ಹಾಗೂ ಆಧಾರರಹಿತ ಅರ್ಜಿಗಳನ್ನು ಸಲ್ಲಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದರು.


ಈ ಕುರಿತು ಕಾಂಗ್ರೆಸ್ ನಿಯೋಗವು ಮಂಗಳವಾರ ಬಿ.ಸಿ.ರೋಡಿನ ಆಡಳಿತ ಸೌಧದಲ್ಲಿ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮಾನಾಥ ರೈ, ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸುವುದು ಅವರ ಪ್ರಜಾಸತ್ತಾತ್ಮಕ ಹಕ್ಕಿಗೆ ಧಕ್ಕೆ ತರುವ ಗಂಭೀರ ವಿಚಾರವಾಗಿದೆ ಎಂದು ಹೇಳಿದರು.


ಮಾಣಿ ಗ್ರಾಮದ ವಿವಿಧ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಹೆಸರುಗಳನ್ನು ಅಳಿಸುವಂತೆ ಫಾರಂ–7ರಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಸಂಬಂಧಪಟ್ಟ ಮತದಾರರು ತಮ್ಮ ವಿಳಾಸದಲ್ಲಿ ವಾಸವಾಗಿಲ್ಲ ಅಥವಾ ಸ್ಥಳಾಂತರಗೊಂಡಿದ್ದಾರೆ ಎಂದು ಅರ್ಜಿಗಳಲ್ಲಿ ಉಲ್ಲೇಖಿಸಲಾಗಿದ್ದರೂ, ಈ ಮಾಹಿತಿಗಳು ವಾಸ್ತವಾಂಶಕ್ಕೆ ವಿರುದ್ಧವಾಗಿವೆ ಎಂದು ಅವರು ಆರೋಪಿಸಿದರು.
“ಯಾವುದೇ ಪಕ್ಷಕ್ಕೆ ಸೇರಿದ ಅರ್ಹ ಮತದಾರರ ಹೆಸರನ್ನು ಅಳಿಸುವುದು ಎಂದರೆ ಅವರನ್ನು ಜೀವಂತವಾಗಿಯೇ ಸಾಯಿಸಿದಂತಾಗುತ್ತದೆ” ಎಂದು ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.


ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾ ವಲಸಿಗರ ನೆಪದಲ್ಲಿ ಮತದಾರರ ಹೆಸರುಗಳನ್ನು ಅಳಿಸಿದ ಆರೋಪಗಳಿದ್ದರೆ, ಬಂಟ್ವಾಳದಲ್ಲಿ ಅಂತಹ ಸಮಸ್ಯೆ ಇಲ್ಲ. ಆದರೆ ಅರ್ಹ ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದರು.
ಸುಳ್ಳು ಮತ್ತು ಆಧಾರರಹಿತ ಅರ್ಜಿಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ಅಕ್ರಮವಾಗಿ ಮತದಾರರ ಹೆಸರು ಅಳಿಸಲು ಯತ್ನಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರತಿಯೊಬ್ಬ ಅರ್ಹ ಮತದಾರನಿಗೂ ತನ್ನ ಮತದಾನದ ಹಕ್ಕು ದೊರೆಯುವಂತೆ ಚುನಾವಣಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದರು.


ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಚಂದ್ರಪ್ರಕಾಶ ಶೆಟ್ಟಿ, ಪಿಯೂಸ್ ಎಲ್. ರಾಡ್ರಿಗಸ್, ಬಿ. ಪದ್ಮಶೇಖರ ಜೈನ್, ಬೇಬಿ ಕುಂದರ್, ಸುದರ್ಶನ್ ಜೈನ್, ಕೆ. ಪದ್ಮನಾಭ ರೈ, ಸುದೀಪ್ ಕುಮಾರ್ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಅಬ್ಬಾಸ್ ಆಲಿ, ಸದಾಶಿವ ಬಂಗೇರ, ಕೆ. ಸಂಜೀವ ಪೂಜಾರಿ, ಮಹಮ್ಮದ್ ಶರೀಫ್, ಜಯಂತಿ ಪೂಜಾರಿ, ಐಡಾ ಸುರೇಶ್, ಉಮೇಶ್ ಬೋಳಂತೂರು, ನವಾಝ್ ಬಡಕಬೈಲು, ಸಿದ್ದಿಕ್ ಗುಡ್ಡೆಯಂಗಡಿ, ಆಲ್ಬರ್ಟ್ ಮಿನೇಜಸ್, ಮಹಮ್ಮದ್ ನಂದಾವರ, ಸುರೇಶ್ ಕುಲಾಲ್ ನಾವೂರು, ಸುಧಾಕರ ಶೆಣೈ ಕಂಡಿಗ, ಜಗದೀಶ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *