ಮಂಗಳೂರು: ಪಣಂಬೂರು ಬೀಚ್‌ನಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ 14 ವರ್ಷದ ಬಾಲಕ ನಾಪತ್ತೆಯಾಗಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಬಾಲಕ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

ನಾಪತ್ತೆಯಾದ ಬಾಲಕನನ್ನು ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ರೆಂಕೆದ ಗುತ್ತು ನಿವಾಸಿ ಸೇಸಪ್ಪ ಅವರ ಪುತ್ರ ಶ್ರೇಯಸ್ (14) ಎಂದು ಗುರುತಿಸಲಾಗಿದೆ.
ಶ್ರೇಯಸ್ ಐವರು ಸ್ನೇಹಿತರೊಂದಿಗೆ ಪಣಂಬೂರು ಬೀಚ್‌ಗೆ ತೆರಳಿದ್ದು, ಎಲ್ಲರೂ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಭಾರೀ ಅಲೆಯ ಹೊಡೆತಕ್ಕೆ ಸಿಲುಕಿ ಶ್ರೇಯಸ್ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಘಟನೆ ಬಗ್ಗೆ ಸ್ನೇಹಿತರಿಂದ ಮಾಹಿತಿ ಪಡೆದ ಬಳಿಕ ಶ್ರೇಯಸ್ ಅವರ ತಂದೆ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ಬಾಲಕನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.




