ತಣ್ಣೀರುಪಂತ: ಕರ್ನಾಟಕ ಟಿವಿ ಕೊಡಮಾಡುವ ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದ ‘ಉತ್ತಮ ಶಾಸಕ ಪ್ರಶಸ್ತಿ-2026’ ಪುರಸ್ಕೃತರಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಗ್ರಾಮದ ಅಭಿನಂದನಾ ಸಮಿತಿ ವತಿಯಿಂದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಗೌರವಾಭಿನಂದನಾ ಕಾರ್ಯಕ್ರಮ ಕಲ್ಲೇರಿ ಸಿ.ಎ. ಬ್ಯಾಂಕ್ ರೈತ ಸಭಾಭವನದಲ್ಲಿ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ, ಜನರು ನೀಡಿದ ಪ್ರೀತಿಯ ಸನ್ಮಾನವನ್ನು ಅತ್ಯಂತ ಗೌರವದಿಂದ ಸ್ವೀಕರಿಸುತ್ತೇನೆ. ಆದರೆ ಈ ಗೌರವ ನನಗೆ ಮಾತ್ರ ಸೀಮಿತವಲ್ಲ. ತಣ್ಣೀರುಪಂತ, ಕರಾಯ, ಬಾರ್ಯ, ಉರುವಾಲು, ತೆಕ್ಕಾರು, ಪುತ್ತಿಲ ಹಾಗೂ ಇಳಂತಿಲ ಗ್ರಾಮದ ಜನರಿಗೆ ಈ ಸನ್ಮಾನವನ್ನು ಅರ್ಪಿಸುತ್ತೇನೆ ಎಂದರು.

ಜನರ ಆಶೀರ್ವಾದದಿಂದ ಶಾಸಕನಾದ ಬಳಿಕ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಪ್ರಸ್ತುತ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಅನುದಾನಗಳು ಬರುತ್ತಿಲ್ಲ. ಆದರೂ ತಾಲೂಕಿನ ಜನರಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲೂ ಪ್ರಾಮಾಣಿಕವಾಗಿ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

ಹಿರಿಯ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗತ್ತ ಅವರು ಅಭಿನಂದನಾ ಭಾಷಣ ಮಾಡಿದರು. ‘ನವ ಬೆಳ್ತಂಗಡಿ ನಿರ್ಮಾಣದ ಶಿಲ್ಪಿ ಶಾಸಕ ಹರೀಶ್ ಪೂಂಜಾ’ ಎಂದು ಬಣ್ಣಿಸಿದ ಅವರು, ಅಭಿವೃದ್ಧಿಯ ವಿಚಾರದಲ್ಲಿ ಬೆಳ್ತಂಗಡಿಯತ್ತ ಇಡೀ ದೇಶವೇ ಗಮನ ಹರಿಸುವಂತೆ ಮಾಡಿದ ಹೆಮ್ಮೆ ಶಾಸಕರಿಗೆ ಸಲ್ಲುತ್ತದೆ ಎಂದರು. ಶಾಸಕರ ಮೊದಲ ಅವಧಿಯಲ್ಲಿ ಕ್ಷೇತ್ರಕ್ಕೆ ದೊರೆತ ಅನುದಾನ ಹಾಗೂ ನಡೆದ ಅಭಿವೃದ್ಧಿ ಕಾರ್ಯಗಳು ಇದಕ್ಕೆ ಸಾಕ್ಷಿಯಾಗಿದ್ದು, ತಾಲೂಕಿನ ಪ್ರಗತಿಯ ಚಿತ್ರಣವನ್ನು ಮತ್ತಷ್ಟು ಬದಲಾಯಿಸುವ ಸಾಮರ್ಥ್ಯ ಹರೀಶ್ ಪೂಂಜಾ ಅವರಿಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರಾಯ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಉದ್ಯಮಿ ಹಲೇಜಿ ಅತುಲ್ ಕುಮಾರ್ ಅವರು ಶಾಸಕ ಹರೀಶ್ ಪೂಂಜಾ ಅವರ ಮಾದರಿ ಕಾರ್ಯವೈಖರಿ, ಸಾಮಾಜಿಕ ಸೇವಾ ಮನೋಭಾವ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯ ದೃಷ್ಟಿಕೋನ ಹಾಗೂ ತಾಲೂಕಿನಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಅವರು ಮತ್ತಷ್ಟು ಹೆಚ್ಚಿನ ಬಹುಮತದಿಂದ ಶಾಸಕರಾಗಿ, ಸಚಿವರಾಗಿ ತಾಲೂಕಿನ ಅಭಿವೃದ್ಧಿಗೆ ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಪೊಲೀಸ್ ಅಧಿಕಾರಿ ಸುದರ್ಶನ್ ಕೊಲ್ಲಿ ಸುಪ್ರಭಾತ, ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ, ಕರಾಯ ಆನಂದ ಟೈಲರ್ ಪೂಂಜಾಳ, ಬಾರ್ಯ ಬಿಜೆಪಿ ಹಿರಿಯ ಕಾರ್ಯಕರ್ತ ಸೀತಾರಾಮ ಶೆಟ್ಟಿ ಸುರಿಯ, ತೆಕ್ಕಾರು ಸಮಾಜ ಸೇವಕ ಹಾಗೂ ಪ್ರಗತಿಪರ ಕೃಷಿಕ ಸಂದೇಶ್ ಕುಮಾರ್ ಜೈನ್, ಪುತ್ತಿಲ ಬಿಜೆಪಿ ಹಿರಿಯ ಕಾರ್ಯಕರ್ತ ಜನಾರ್ಧನ ಶೆಟ್ಟಿ, ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅನಂತಕೃಷ್ಣ ಕುದ್ದಣ್ಣಾಯ, ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೇಸಪ್ಪ ಸಾಲ್ಯಾನ್, ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಾನಂದ ಕಲ್ಲಾಪು, ಬಿಜೆಪಿ ಜಿಲ್ಲಾ ಪ್ರಕೋಷ್ಠ ಸಹ ಸಂಚಾಲಕ ಇಂಜಿನಿಯರ್ ಪ್ರಸನ್ನ ದರ್ಬೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿನ ಗಮನಾರ್ಹ ಸಾಧನೆಗಾಗಿ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ‘ಎಮಿನೆಂಟ್ ಇಂಜಿನಿಯರ್-2026’ ಪ್ರಶಸ್ತಿ ಪಡೆದ ಬಿಜೆಪಿ ಜಿಲ್ಲಾ ಪ್ರಕೋಷ್ಠ ಸಹ ಸಂಚಾಲಕ ಇಂಜಿನಿಯರ್ ಪ್ರಸನ್ನ ದರ್ಬೆ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಸ್ಪಂದನ ಸಮಿತಿ ಬಾರ್ಯ–ಪುತ್ತಿಲ ವತಿಯಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಇತ್ತೀಚೆಗೆ ನಿಧನರಾದ ಪುತ್ತಿಲ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರವೀಣ್ ಬೆಂಗಿಲ ಅವರ ಮಗುವಿನ ಭವಿಷ್ಯದ ಭದ್ರತೆಗಾಗಿ ರೂ.2 ಲಕ್ಷ ಸಂಗ್ರಹಿಸಿ ಎಫ್‌ಡಿ ಬಾಂಡ್ ವಿತರಿಸಲಾಯಿತು. ಜನಾರ್ಧನ ಪೂಜಾರಿ ಅವರ ಮನೆ ನಿರ್ಮಾಣಕ್ಕೆ ಸಿಮೆಂಟ್ ಶೀಟ್ ಅಳವಡಿಸಲು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಲಿಂಗಪ್ಪ ಬೊಲ್ಲಗುರಿ ಅವರಿಗೆ ಆರ್ಥಿಕ ನೆರವು ನೀಡಲಾಯಿತು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಸಾಧಕಿ ಕು. ರಕ್ಷಾ ಡಿ. ಅವರಿಗೆ ಧನಸಹಾಯದ ಜೊತೆಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಚಿದಾನಂದ ನಾಯ್ಕ್ ಕುಪ್ಪೆಟ್ಟಿ ವಂದೇ ಮಾತರಂ ಹಾಡಿದರು. ಜಯಾನಂದ ಕಲ್ಲಾಪು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸತೀಶ್ ಹೊಸ್ಮಾರ್ ನಿರೂಪಿಸಿದರು. ಪ್ರಭಾಕರ ಗೌಡ ಪೊಸಂದೋಡಿ ವಂದಿಸಿದರು. ಮಾನಸ ಕಲಾ ಆರ್ಟ್ಸ್ ಕಲ್ಲೇರಿ–ಉಪ್ಪಿನಂಗಡಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿದ್ದರು.


