ಬಂಟ್ವಾಳ: ತಾಲೂಕಿನ ತಲಪಾಡಿ ಬಳಿ ಸೋಮವಾರ ಲಾರಿ, ಬಸ್ ಹಾಗೂ ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಏಕಾಏಕಿ ಪ್ರವೇಶಿಸಿದ ಲಾರಿ ಮಂಗಳೂರು ಕಡೆಗೆ ತಿರುಗುತ್ತಿದ್ದ ವೇಳೆ, ಮಂಗಳೂರು ಕಡೆಯಿಂದ ಬಿಸಿರೋಡು ಕಡೆಗೆ ತೆರಳುತ್ತಿದ್ದ ಬಸ್ಗೆ ಡಿಕ್ಕಿಯಾಗಿದೆ. ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬಸ್ ಚಾಲಕ ತಕ್ಷಣ ಬ್ರೇಕ್ ಹಾಕಿದ ಪರಿಣಾಮ, ಹಿಂಬದಿಯಿಂದ ಬರುತ್ತಿದ್ದ ಕಾರು ಬಸ್ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಬಸ್ ಚಾಲಕನಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದೆ. ಬಸ್ ಹಾಗೂ ಕಾರಿನಲ್ಲಿದ್ದ ಇತರರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಅಪಘಾತದ ಪರಿಣಾಮ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಘಟನೆಯ ಕುರಿತು ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.



