ಬೆಂಗಳೂರು: ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರದಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆದ ಹಲ್ಲೆ ಘಟನೆಯ ಬಳಿಕ 25 ವರ್ಷದ ಜಿಮ್ ತರಬೇತುದಾರ ನಂದನ್ ಮೃತಪಟ್ಟಿದ್ದಾರೆ.

ನಂದನ್ ಅವರು ಕೆಲಸ ಮಾಡುತ್ತಿದ್ದ ಜಿಮ್ನ ವಾರ್ಷಿಕೋತ್ಸವ ಕಾರ್ಯಕ್ರಮದ ಬಳಿಕ ಈ ಘಟನೆ ನಡೆದಿದೆ ಎನ್ನಲಾಗಿದೆ. ಶನಿವಾರ ಮನೆಯಿಂದ ಹೊರಡುವ ವೇಳೆ ತಡವಾದರೆ ಬೆಳಗ್ಗೆ ವಾಪಸ್ ಬರುವುದಾಗಿ ನಂದನ್ ಕುಟುಂಬದವರಿಗೆ ತಿಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜಿಮ್ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿದ ಬಳಿಕ ನಂದನ್ ಹಾಗೂ ಜಿಮ್ನ ಇತರ ಸಿಬ್ಬಂದಿ ಪರಿಚಯಸ್ಥರೊಬ್ಬರ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ಅಲ್ಲಿ ನಡೆದ ಜಗಳದ ವೇಳೆ ನಂದನ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಹಲ್ಲೆಯ ಬಳಿಕ ನಂದನ್ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ನಂದನ್ ಅವರ ತಾಯಿ ಮಂಜುಳಾ, ಮಗನ ದೇಹದ ಮೇಲಿದ್ದ ಗಾಯದ ಗುರುತುಗಳನ್ನು ಗಮನಿಸಿದ್ದು, ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಜಗಳದ ವೇಳೆ ಹಲ್ಲೆ ನಡೆಸಿದ್ದರಿಂದಲೇ ನಂದನ್ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಮೃತಹಳ್ಳಿ ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

