Breaking
22 Aug 2026, Sat

ಬೆಳ್ತಂಗಡಿ: ಸುಮಂತ್ ಸಾವಿನ ಪ್ರಕರಣ; ಬ್ರೈನ್ ಮ್ಯಾಪಿಂಗ್ ಪರೀಕ್ಷೆ

ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಗೇರುಕಟ್ಟೆ ಸಮೀಪದ ಸಂಭೋಳ್ಯ ನಿವಾಸಿ ಸುಮಂತ್ (15) ಅವರ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯ ಭಾಗವಾಗಿ ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ಬ್ರೈನ್ ಮ್ಯಾಪಿಂಗ್ ಹಾಗೂ ನಾರ್ಕೋ ಅನಾಲಿಸಿಸ್ ಪರೀಕ್ಷೆಗಳ ಪ್ರಕ್ರಿಯೆ ಆರಂಭವಾಗಿದೆ. ನ್ಯಾಯಾಲಯದ ಅನುಮತಿಯೊಂದಿಗೆ ಈ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಸುಮಂತ್ ಅವರು ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. 2026ರ ಜನವರಿ 14ರಂದು ಧನುಪೂಜೆಗೆ ತೆರಳುವ ಸಂದರ್ಭದಲ್ಲಿ ಸಮೀಪದ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಬೆಳಗ್ಗೆ ನಿಗೂಢವಾಗಿ ಮೃತಪಟ್ಟಿದ್ದರು.

ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಪ್ರಕರಣದ ಮೊದಲ ಹಂತದ ತನಿಖೆಗಾಗಿ ಸುಮಂತ್ ಅವರ ಕುಟುಂಬದ ಐವರನ್ನು ಈಗಾಗಲೇ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ಆ.10ರಂದು ಸುಮಂತ್ ಅವರ ತಂದೆ ಸುಬ್ರಹ್ಮಣ್ಯ ನಾಯಕ್ ಹಾಗೂ ತಾಯಿ ರತ್ನಾವತಿ ಅವರನ್ನು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿಚಾರಣೆ ನಡೆಸಲಾಯಿತು. ಬಳಿಕ ಸುಮಂತ್ ಅವರ ಸಹೋದರ ಸುದರ್ಶನ ಅವರನ್ನು ಮಧ್ಯಾಹ್ನದಿಂದ ಸಂಜೆವರೆಗೆ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಯಿತು.

ಆ.11ರಂದು ರತ್ನಾವತಿ ಅವರ ಸಹೋದರ ರಾಧಾಕೃಷ್ಣ ಹಾಗೂ ಸಂಬಂಧಿ ಲಕ್ಷ್ಮೀನಾರಾಯಣ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ಐವರು ನೀಡಿರುವ ಹೇಳಿಕೆಗಳನ್ನು ಪ್ರಕರಣದ ತನಿಖೆಯಲ್ಲಿ ಸಂಗ್ರಹಿಸಿರುವ ಮಾಹಿತಿಯೊಂದಿಗೆ ತಜ್ಞರು ಹೋಲಿಕೆ ಮಾಡಿ ವಿಶ್ಲೇಷಿಸುತ್ತಿದ್ದಾರೆ.

ಸಂಬಂಧಪಟ್ಟವರಿಗೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯ ಮುಂದಿನ ಹಂತಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಪ್ರಕರಣದಲ್ಲಿ ಗುರುತಿಸಲಾಗಿರುವ ಇತರ ಶಂಕಿತರನ್ನೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸುತ್ತಿದೆ.

ಸುಮಂತ್ ಅವರ ಅಸಹಜ ಸಾವು, ಅವರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಿರಬಹುದು ಎಂಬ ಅನುಮಾನಗಳು ಆರಂಭದಲ್ಲೇ ವ್ಯಕ್ತವಾಗಿದ್ದವು. ಪೊಲೀಸರು ವಿಶೇಷ ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದರೂ, ಪ್ರಕರಣದ ನಿಗೂಢತೆಗೆ ಈವರೆಗೆ ಸ್ಪಷ್ಟ ಉತ್ತರ ದೊರೆತಿಲ್ಲ.

Leave a Reply

Your email address will not be published. Required fields are marked *