Breaking
12 Oct 2026, Mon

ಬರಾಯಕೆರೆ ಗಣಿಗಾರಿಕೆ ಆರೋಪ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ, ಪರಿಶೀಲನೆ

ಬೆಳ್ತಂಗಡಿ: ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲ್ಯ ಗ್ರಾಮದ ಐತಿಹಾಸಿಕ ಬರಾಯಕೆರೆ ಪ್ರದೇಶದಲ್ಲಿ ನಡೆಯುತ್ತಿರುವ ಕಪ್ಪುಕಲ್ಲು ಗಣಿಗಾರಿಕೆ ಕುರಿತು ಬರಾಯಕೆರೆ ಸಂರಕ್ಷಣಾ ಸಮಿತಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರಿಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ಬೆಳ್ತಂಗಡಿ ತಹಶೀಲ್ದಾರ್ ಎನ್.ಎಸ್. ನರಗುಂದ ಅವರು ಶುಕ್ರವಾರ(ಆ.21) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳೀಯ ಭೂಮಾಲೀಕ ಹಾಗೂ ನ್ಯಾಯವಾದಿ ಶ್ರೀಕಾಂತ್ ಭಟ್ ಅವರು ಕೃಷಿ ಚಟುವಟಿಕೆಯ ಹೆಸರಿನಲ್ಲಿ ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಸ್ಥಳೀಯರು, ಗಣಿಗಾರಿಕೆ ವೇಳೆ ಕಾನೂನುಬಾಹಿರವಾಗಿ ಸ್ಫೋಟಕಗಳನ್ನು ಬಳಸಲಾಗುತ್ತಿದೆ ಎಂದು ದೂರಿದರು.

ಗಣಿಗಾರಿಕೆಯಿಂದ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಸ್ಥಳೀಯರ ಮನೆಗಳು ಬಿರುಕು ಬಿಟ್ಟಿವೆ. ಕೃಷಿ ಬೆಳೆಗಳಿಗೆ ಕಲ್ಲು ಹಾಗೂ ಕಲ್ಲಿನ ಪುಡಿಯಿಂದ ಹಾನಿಯಾಗುತ್ತಿದೆ. ಬೃಹತ್ ಗಾತ್ರದ ಲಾರಿಗಳ ಸಂಚಾರದಿಂದ ಗ್ರಾಮ ಪಂಚಾಯತ್ ರಸ್ತೆಗಳು ಹಾಗೂ ಮೋರಿಗಳು ಹಾನಿಗೊಳಗಾಗಿವೆ. ಐತಿಹಾಸಿಕ ಬರಾಯಕೆರೆ ಕೂಡ ಕಲುಷಿತಗೊಂಡಿದೆ ಎಂದು ಸಾರ್ವಜನಿಕರು ತಹಶೀಲ್ದಾರ್ ಅವರ ಗಮನಕ್ಕೆ ತಂದರು.

ಸಾರ್ವಜನಿಕರ ಅಹವಾಲು ಆಲಿಸಿದ ತಹಶೀಲ್ದಾರ್ ಎನ್.ಎಸ್. ನರಗುಂದ ಅವರು, ಮತ್ತೊಮ್ಮೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.

ತಹಶೀಲ್ದಾರ್ ಅವರೊಂದಿಗೆ ವೇಣೂರು ಹೋಬಳಿ ಕಂದಾಯ ನಿರೀಕ್ಷಕ ಕುಮಾರಸ್ವಾಮಿ, ಅಳದಂಗಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಪೂವಪ್ಪ ಮಲೆಕುಡಿಯ ಹಾಗೂ ಪಿಲ್ಯ ಗ್ರಾಮ ಆಡಳಿತಾಧಿಕಾರಿ ಭಾರತಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರಶಾಂತ್ ವೇಗಸ್, ಬರಾಯಕೆರೆ ಸಂರಕ್ಷಣಾ ಸಮಿತಿ ಮುಖಂಡರಾದ ಲಿಯೋ ಪಿರೇರಾ, ಹರೀಶ್ ಪೂಜಾರಿ, ಗಣೇಶ್ ದೇವಾಡಿಗ, ಮೇಲ್ವಿನ್ ಡಿಸೋಜ, ಪ್ರವೀಣ್ ನಿನ್ನಿಕಲ್ಲು, ಜೋನ್ ಡಿಸೋಜ, ದಿನೇಶ್ ಪೂಜಾರಿ, ಪ್ರಶಾಂತ್ ಪೂಜಾರಿ, ಕೂಸ ಅಳದಂಗಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *