ನಂದಾವರ: ನಂದಾವರ ಚಿಕ್ಕಮೇಳದ ಆರನೇ ವರ್ಷದ ಮಳೆಗಾಲದ ತಿರುಗಾಟ “ಮನೆ ಮನೆಗೆ ಯಕ್ಷಗಾನ” ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನದಲ್ಲಿ ಗೆಜ್ಜೆ ಪೂಜೆಯೊಂದಿಗೆ ಅಧಿಕೃತ ಚಾಲನೆ ನೀಡಲಾಯಿತು.

ಪ್ರಥಮ ಸೇವೆ ಆಟವನ್ನು ಪ್ರದರ್ಶಿಸುವ ಮೂಲಕ ತಿರುಗಾಟಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಪ್ರಧಾನ ಅರ್ಚಕ ಮಹೇಶ್ ಕುಮಾರ್ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಪ್ರಭಾಕರ ಶೆಟ್ಟಿ, ಮಾಜಿ ಅಧ್ಯಕ್ಷ ಪಿ. ದ್ಯಾಣ, ಅರವಿಂದ ಭಟ್ ಹಾಗೂ ನಂದಾವರ ಚಿಕ್ಕಮೇಳದ ಸಂಚಾಲಕ ಭಾಸ್ಕರ ಸರಪಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದ ಕಲಾವಿದರು ಭಾಗವಹಿಸಿ, ಯಶಸ್ವಿ ತಿರುಗಾಟಕ್ಕಾಗಿ ಪ್ರಾರ್ಥಿಸಿದರು. ಮಳೆಗಾಲದ ಅವಧಿಯಲ್ಲಿ ಮನೆ ಮನೆಗೆ ಯಕ್ಷಗಾನವನ್ನು ತಲುಪಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ತಿರುಗಾಟಕ್ಕೆ ಭಕ್ತರು ಹಾಗೂ ಯಕ್ಷಗಾನ ಅಭಿಮಾನಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.





