ಕೇರಳ: ಕೊಟ್ಟಾಯಂನ ಕರುಕಾಚಲದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟಿದ್ದು ಉಳಿದ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಮುಲ್ಕಿ ತಾಲೂಕಿನ ಅಂಗರಗುಡ್ಡೆ ನಿವಾಸಿ, ಶಾನವಾಝ್ ಯಾನೆ ಶಮೀಮ್ (32 ವ) ಎಂದು ಗುರುತಿಸಲಾಗಿದೆ. ಇವರು ತುಳುವಿನ ಜೈ ಚಿತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.

ಅಪಘಾತದಲ್ಲಿ ಗಾಯಗೊಂಡವರನ್ನು ಕಾಟಿಪಳ್ಳದ ಸಿರಾಜ್, ಕಾನ ನಿವಾಸಿ ಅಶ್ಫಾಕ್, ಸೂರಿಂಜೆ ನಿವಾಸಿ ಶಬೀರ್, ಇನ್ನೋರ್ವ ರಾಜಸ್ಥಾನ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಕರುಕಾಚಲದಿಂದ ಕೊಟ್ಟಾಯಂಗೆ ಬರುತ್ತಿದ್ದ ಕಾರಿನಲ್ಲಿ 5 ಜನ ಪ್ರಯಾಣಿಸುತ್ತಿದ್ದು ಕಾರು ನಿಯಂತ್ರಣ ತಪ್ಪಿ 20 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದು ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.


