Breaking
23 Dec 2024, Mon

ದಕ್ಷಿಣ ಕನ್ನಡದಲ್ಲಿ ಸುರಿದ‌ ಭಾರೀ ಮಳೆ: ಕೆದಿಲದಲ್ಲಿ ಸಿಡಿಲಿಗೆ ಬಾಲಕ ಬಲಿ

ಮಂಗಳೂರು: ಭಾನುವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಸಿಡಿಲು ಮಿಂಚಿನೊಂದಿಗೆ ಭಾರಿ ಮಳೆಯಾಗಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಪುತ್ತೂರು, ಕಡಬ, ಬಂಟ್ವಾಳ ಹಾಗೂ ಮಂಗಳೂರಿನ ಕೆಲವೆಡೆ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಲ್ಲಿಯೂ ಸಂಜೆ ವೇಳೆ ವರುಣನ ಅಬ್ಬರವಾಗಿದೆ.

ಈ ನಡುವೆ ಬಂಟ್ವಾಳ ತಾಲೂಕಿನ ಕೆದಿಲದಲ್ಲಿ ಸಿಡಿಲಾಘಾತಕ್ಕೆ ಕುಸಿದು ಬಿದ್ದು ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಗಡಿಯಾರ ಸಮೀಪ ಮುರಿಯಾಜೆ ಮನೆಯ ಚಂದ್ರಹಾಸ ಎಂಬವರ ಪುತ್ರ ಸುಬೋಧ್ ಸಿ (14) ಸಾವನ್ನಪ್ಪಿದ ಬಾಲಕ.

ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಕಲಿಯುತ್ತಿರುವ ಸುಬೋಧ್, ಸದಾ ಚಟುವಟಿಕೆಯಲ್ಲಿರುವಾತ. ಭಾನುವಾರ ಮನೆಯ ಹೊರಗಿನ ಜಗಲಿಯಲ್ಲಿ ಕುಳಿತುಕೊಂಡಿದ್ದ ವೇಳೆ ಆಗಸದಲ್ಲಿ ಗುಡುಗು, ಮಿಂಚಿನ ಶಬ್ದದ ಜೊತೆ ಸಿಡಿಲು ಅಪ್ಪಳಿಸಿದೆ. ಈ ವೇಳೆ ದೊಡ್ಡ ಸದ್ದು ಹಾಗೂ ಸಿಡಿಲಿನ ಹೊಡೆತಕ್ಕೆ ಆಘಾತಗೊಂಡ ಬಾಲಕ ಸ್ಥಳದಲ್ಲಿ ಬಿದ್ದಿದ್ದಾನೆ.ಘಟನೆಯಿಂದ ಕಳವಳಗೊಂಡ ತಂದೆ ಚಂದ್ರಹಾಸ್, ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಈತನನ್ನು ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಸ್ಥಳಕ್ಕೆ ಕೆದಿಲ ಗ್ರಾಪಂ ಅಧ್ಯಕ್ಷ ಹರೀಶ್ ವಾಲ್ತಾಜೆ, ಸದಸ್ಯರಾದ ಅಜೀಜ್, ಉಮೇಶ್ ಮುರುವ, ಕಂದಾಯ ಇಲಾಖೆಯ ರೆವೆನ್ಯೂ ಇನ್ಸ್ ಪೆಕ್ಟರ್ ಪ್ರಶಾಂತ್ ಶೆಟ್ಟಿ ಹಾಗೂ ಗ್ರಾಮಾಡಳಿತಾಧಿಕಾರಿ ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಯಿತು.

Leave a Reply

Your email address will not be published. Required fields are marked *