Breaking
20 Sep 2026, Sun

ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ: ಆರೋಪಿ ಜಾಮೀನು ಅರ್ಜಿ ವಜಾ

ಪುತ್ತೂರು: ‘ಕಲ್ಲೇಗ ಟೈಗರ್ಸ್’ ಹುಲಿ ವೇಷ ತಂಡದ ಅಕ್ಷಯ್ ಕಲ್ಲೇಗ (26) ಅವರ ಕೊಲೆ ಪ್ರಕರಣದ ಮೂರನೇ ಆರೋಪಿ, ಪುತ್ತೂರು ನಗರದ ಹೊರವಲಯದ ಪಡೀಲು ನಿವಾಸಿ ಮಂಜುನಾಥ್ ಅಲಿಯಾಸ್ ಮಂಜು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.

ಅಕ್ಷಯ್ ಕಲ್ಲೇಗ ಅವರನ್ನು ಚಿಕ್ಕಮುನ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ ಮನೀಶ್, ಬನ್ನೂರು ಗ್ರಾಮ ಕೃಷ್ಣ ನಗರದ ಖಾಸಗಿ ಬಸ್ ಚಾಲಕ ಚೇತನ್, ಪಡೀಲು ನಿವಾಸಿ ಮಂಜುನಾಥ್ ಮತ್ತು ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಕೇಶವ ಪಡೀಲು ಸೇರಿ 2023 ರ ನವೆಂಬರ್ 6 ರ ತಡರಾತ್ರಿ ಪುತ್ತೂರಿನ ನೆಹರೂನಗರದಲ್ಲಿ ಕೊಲೆ ಮಾಡಿದ್ದರು.

ಅಕ್ಷಯ್ ಸ್ನೇಹಿತ ವಿಖ್ಯಾತ್‌ ನೀಡಿದ್ದ ದೂರಿನಂತೆ ಪುತ್ತೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ಮಂಜುನಾಥ್, ಅನಾರೋಗ್ಯದ ಕಾರಣ ನೀಡಿ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದ. ಆದರೆ ಸರಕಾರಿ ಅಭಿಯೋಜಕರು ಆರೋಪಿಗೆ ಜಾಮೀನು ಮಂಜೂರು ಮಾಡದಂತೆ ವಾದ ಮಂಡನೆ ಮಾಡಿದ್ದರು. ಸದ್ಯ, ನ್ಯಾಯಾಲಯವು ಮಂಜುನಾಥ್‌ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

Leave a Reply

Your email address will not be published. Required fields are marked *