ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಸೋಮವಾರ ಶ್ರೀ ಲಲಿತಾ ಪಂಚಮಿ ಮಹೋತ್ಸವ – ಶ್ರೀ ಚಂಡಿಕಾ ಯಾಗ ಹಾಗೂ ಕಲಾಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳವರು, ನಾವು ಮಾಡಿದ ದಾನಧರ್ಮ ಸತ್ಕಾರ್ಯ ನಮ್ಮನ್ನು ಆಪತ್ತಿನಿಂದ ರಕ್ಷಿಸುತ್ತದೆ. ಹೃದಯದ ಭಾಷೆಯ ಮೂಲಕ ಭಗವಂತನ ಅನುಸಂಧಾನ ಸಾಧ್ಯ. ಭಾಷೆ ಯಾವುದಾದರೂ ಪ್ರೀತಿ ಭಾವ ನಮ್ಮಲ್ಲಿರಬೇಕು. ದ್ವೇಷ ಭಾವ ಕಡಿಮೆಯಾಗಲು ಪ್ರೀತಿ ಭಾವ ಹೆಚ್ಚಾಗಬೇಕು. ಕಲಾವಿದರಲ್ಲಿ ಅಡಗಿರುವ ಕಲೆಯನ್ನು ಅನಾವರಣ ಗೊಳಿಸುವ ಪ್ರಯತ್ನ ಪ್ರಶಸ್ತಿ ಪ್ರದಾನದಲ್ಲಿ ನಡೆಯುತ್ತಿದೆ. ಧರ್ಮ ಶ್ರದ್ದೆಯೊಂದಿಗೆ ದೇಶ ಕಟ್ಟುವ ಕೆಲಸ ಮಾಡೋಣ ಎಂದು ಲಲಿತಾ ಪಂಚಮಿ ಮಹೋತ್ಸವದ ಸಂದೇಶ ನೀಡಿದರು.
ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು.


ಶ್ರೀ ಸಂಸ್ಥಾನದ ‘ಕಲಾಸಿರಿ’ ಪ್ರಶಸ್ತಿ ಪ್ರದಾನ: ಪ್ರಸಿದ್ಧ ಯಕ್ಷಗಾನ ಭಾಗವತರಾದ ದಿನೇಶ್ ಅಮ್ಮಣ್ಣಾಯ, ಕರ್ನಾಟಕ ‘ಕಲಾಶ್ರೀ’ ಪ್ರಶಸ್ತಿ ಪುರಸ್ಕೃತ ವಿದುಷಿ ಗೀತಾ ಸರಳಾಯ ಮಂಗಳೂರು, ತುಳು ರಂಗಭೂಮಿ ಕಲಾವಿದ ದೀಪಕ್ ರೈ ಪಾಣಾಜೆ, ನಾಗಸ್ವರ ವಾದಕರಾದ ರಮೇಶ್ ಜೋಗಿ ರವರಿಗೆ ಒಡಿಯೂರು ಶ್ರೀ ಕಲಾಸಿರಿ ಪ್ರಶಸ್ತಿ ಪ್ರದಾನ ನಡೆಯಿತು.
ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಶಾಲಾ ೭ನೇ ತರಗತಿ ವಿದ್ಯಾರ್ಥಿ ಪ್ರಣವ್ ಅವರಿಗೆ ಬಾಲ ಪ್ರತಿಭೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಒಡಿಯೂರು ಶ್ರೀ ದತ್ತ ಪ್ರಕಾಶನ ಪ್ರಕಟಿಸಿರುವ ಮುಳಿಯ ಶಂಕರ ಭಟ್ ಬರೆದ ಕೃತಿಯನ್ನು ಒಡಿಯೂರು ಶ್ರೀಗಳು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಉದ್ಯಮಿ ವಾಮಯ್ಯ ಬಿ. ಶೆಟ್ಟಿ ಮುಂಬೈ, ರೇವತಿ ವಾಮಯ್ಯ ಶೆಟ್ಟಿ, ಡಾ. ಅದಿತ್ ಕೆ. ಶೆಟ್ಟಿ ಮುಂಬೈ, ಮುಳಿಯ ಶಂಕರ ಭಟ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೇಣುಕಾ ಎಸ್ ರೈ ಪ್ರಾರ್ಥಿಸಿದರು. ಯಶವಂತ ವಿಟ್ಲ ಸ್ವಾಗತಿಸಿದರು. ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕರಾದ ಗಣಪತಿ ಭಟ್ ಸೇರಾಜೆ ವಂದಿಸಿದರು. ಮಾತೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ದೀಪಾರಾಧನೆ, ಗಣಪತಿ ಹವನ, ನಾಗಾರಾಧನೆ ಬಳಿಕ ವೇದಮೂರ್ತಿ ಚಂದ್ರಶೇಖರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಚಂಡಿಕಾ ಯಾಗ ನಡೆಯಿತು.
ಧಾರ್ಮಿಕ ಸಭೆಯ
ಅನಂತರ ವಜ್ರಮಾತೆಗೆ ಕಲ್ಪೋಕ್ತ ಪೂಜೆ, ಚಂಡಿಯಾಗದ ಪೂರ್ಣಾಹುತಿ, ಅನ್ನ ಸಂತರ್ಪಣೆ ನಡೆಯಿತು. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮ, ಬಳಿಕ ಸಂಜೆ ಸಾಮೂಹಿಕ ಸ್ವಯಂವರ ಪಾರ್ವತಿ ಪೂಜೆ,ರಂಗಪೂಜೆ, ಮಹಾಮಂಗಳಾರತಿ,ಅಷ್ಟಾವಧಾನ ಸೇವೆ ಭದ್ರಕಾಳಿಗೆ ವಿಶೇಷ ಪೂಜೆ ಜರಗಿತು.




