Breaking
24 Mar 2026, Tue

ಬೇಡಿಕೆ ಈಡೇರದಿದ್ದರೆ ಮಿನಿ ವಿಧಾನಸೌಧಕ್ಕೆ ಬೀಗ ಜಡಿಯುತ್ತೇವೆ : ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ರಾಜ್ಯ ಅಧ್ಯಕ್ಷ ಗಿರಿಧರ ನಾಯ್ಕ್

ಪುತ್ತೂರು: ಇರ್ದೆ ಗ್ರಾಮದ ದೂಮಡ್ಕ, ಬಲ್ನಾಡು ಗ್ರಾಮದ ಅಜಕ್ಕಳ, ಆರ್ಯಾಪು ಗ್ರಾಮದ ಮೇಗಿನ ಪಂಜದಲ್ಲಿ ಮೂಲ ಸೌಕರ್ಯವಾದ ರಸ್ತೆ ಸಂಪರ್ಕ ಒದಗಿಸುವಂತೆ ಮತ್ತು ಕಾಲೋನಿ ನಿವಾಸಿಗಳ ಮೇಲಿನ ಕೇಸನ್ನು ಹಿಂಪಡೆಯುವಂತೆ ಆಗ್ರಹಿಸಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ನೇತೃತ್ವದಲ್ಲಿ ಪುತ್ತೂರು ಅಮರ್ ಜವಾನ್ ಸ್ಮಾರಕ ಜ್ಯೋತಿಯ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಗೆ ಆಗಮಿಸಿದ ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್ ಮತ್ತು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು ಪರಿಶೀಲನೆ ಮಾಡಿ ನ್ಯಾಯ ಒದಗಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ 90 ವರ್ಷ ವಯೋಮಾನದ ರಸ್ತೆಯಿಂದ ವಂಚಿತರಾದ ಹಿರಿಯ ಮಹಿಳೆ ಕಮಲ ಅವರು ಡಾ. ಬಾಬ ಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತ್ರದ ಎದುರು ದೀಪ ಪ್ರಜ್ವಲಿಸಿ ಪ್ರತಿಭಟನೆಗೆ ಚಾಲನೆ ನೀಡಿದರು.

ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ರಾಜ್ಯ ಅಧ್ಯಕ್ಷ ಗಿರಿಧರ ನಾಯ್ಕ ಅವರು ಮಾತನಾಡಿ ಇರ್ದೆ ಗ್ರಾಮದ ದೂಮಡ್ಕ, ಬಲ್ನಾಡು ಗ್ರಾಮದ ಅಜಕ್ಕಳ, ಆರ್ಯಾಪು ಗ್ರಾಮದ ಮೇಗಿನ ಪಂಜದಲ್ಲಿ ಮೂಲ ಸೌಕರ್ಯವಾದ ರಸ್ತೆ ಸಂಪರ್ಕ ಒದಗಿಸುವಂತೆ ಮನವಿ ಮಾಡಿ ಸಾಕಾಗಿದೆ. ಬಡವರ ಕೂಗು ಯಾರಿಗೂ ಕೇಳಿಲ್ಲ. ನಾವು ಯಾರಿಗೂ ಜಗ್ಗುವವರಲ್ಲ, ಬಗ್ಗುವರಲ್ಲ. ಹಿಂದು ಸಂಘಟನೆ ರಾಜಕೀಯ ಸಂಘಟನೆ ಶೋ ಮಾಡಿ ಹೋಗುತ್ತಾರೆ ಹೊರತು ಕಟ್ಟಕಡೆಯ ವ್ಯಕ್ತಿಗೆ ಯಾವ ಸ್ಪಂಧನೆಯೂ ಇಲ್ಲ. ಇರ್ದೆ ಬೆಟ್ಟಂಪಾಡಿ 13 ಮನೆ ರಸ್ತೆ ಇಲ್ಲ. ಜನಪ್ರಿಯ ಶಾಸಕ ಅಶೋಕ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು ಪೊಲ್ಲು ಭರವಸೆ ಕೊಟ್ಟಿದ್ದಾರೆ. ಎಲ್ಲ ರಾಜಕೀಯದವರು ಮಾಡುವುದು ಒಂದೆ. ಹಾಗಾಗಿ ಶೋ ಮಾಡುವ ಸಂಘಟನೆಗಳಿಗೆ ತಮ್ಮನ್ನು ಮೀಸಲಿಡಬೇಡಿ.

ನಿಮ್ಮಲ್ಲಿ ಶಕ್ತಿ ಇದ್ದರೆ ನನಗೆ ಆನೆ ಬಲ. ಅಧಿಕಾರಿಗಳಿಗೆ ಪತ್ರ ಕೊಟ್ಟರೆ ಪ್ರಯೋಜನ ಇಲ್ಲ. ಮೋದಿ ಜಿ ಅಚ್ಚೆ ದಿನ್ ಎಂದು ಹೇಳುತ್ತಾರೆ. ಆದರೆ 138 ವರ್ಷದಿಂದ ರಸ್ತೆ ಇಲ್ಲ. ಎಲ್ಲಿ ಹೋಯಿತು ಅಚ್ಚೆ ದಿನ್. ನ್ಯಾಯಕ್ಕಾಗಿ ಹೋದ ನಮ್ಮ ಮೇಲೆ ಕಾಲೋನಿಯರ ಮೇಲೆ ಕ್ರಿಮಿನಲ್ ಕೇಸ್ ಹಾಕಿದ್ದಾರೆ. ಸಿವಿಲ್ ವಿಚಾರಕ್ಕೆ ಕ್ರಿಮಿನಲ್ ಕೇಸ್ ಯಾವ ನ್ಯಾಯ. ಅದೂ ಅಲ್ಲದೆ 13 ಮಂದಿಗೆ ರೂ. 5ಲಕ್ಷ ದಂಡ ಕಟ್ಟುವಂತೆ ಹೇಳಿದ್ದಾರೆ. ಬಡವರಲ್ಲಿ 5 ರೂಪಾಯಿ ಇಲ್ಲದವರು 5ಲಕ್ಷ ಎಲ್ಲಿಂದ ಕಟ್ಟುತ್ತಾರೆ ಎಂದು ಪ್ರಶ್ನಿಸಿದ ಅವರು 13 ಮಂದಿಯ ಮೇಲಿರುವ ಕೇಸ್ ಹಿಂಪಡೆಯಬೇಕು. ನಮ್ಮ ಬೇಡಿಕೆ ಈಡೇರದಿದ್ದರೆ ಮಿನಿ ವಿಧಾನಸೌಧಕ್ಕೆ ಬೀಗ ಜಡಿಯುತ್ತೇವೆ ಎಂದರು.

ದಲಿತ ಸಂಘಟನೆಗಳ ಮುಖಂಡ ಶೇಷಪ್ಪ ನೆಕ್ಕಿಲು ಅವರು ಮಾತನಾಡಿ ಯಾವುದೇ ಸರಕಾರ ಬಂದರೂ ಪರಿಶಿಷ್ಟ ಜಾತಿಗಳ ಸಮಸ್ಯೆಗಳನ್ನು ಈಡೇರಿಸುವ ಮಟ್ಟಕ್ಕೆ ಹೋಗುವುದಿಲ್ಲ. ಇವತ್ತು ಮುಂದುವರಿದ ಸಮಾಜ ಪತ್ರ ವ್ಯವಹಾರ ಮಾಡಬೇಕಾಗಿಲ್ಲ. ಆದರೆ ಪರಿಶಿಷ್ಟ ಜಾತಿ ಪಂಗಡದವರು ರಾಜ್ಯಮಟ್ಟಕ್ಕೂ ಪತ್ರ ವ್ಯವಹಾರ ಮಾಡಿದರೂ ಪ್ರತಿಕ್ರಿಯೇ ಇಲ್ಲ. ಹಾಗಾಗಿ ಬಾಬ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನಕ್ಕೆ ಎಷ್ಟು ಬೆಲೆ ಇದೆ ಎಂಬುದನ್ನು ನಾವು ಪ್ರಶ್ನಿಸಬೇಕಾಗಿದೆ. ನಮ್ಮ ಜನರು ಚುನಾವಣೆ ಬಂದಾಗ ಮತದಾನ ಮಾಡುವಾಗ ಈ ಹೋರಾಟಗಳನ್ನು ನೆನಪಿಸಿಕೊಳ್ಳಬೇಕು. ಅಂಬೇಡ್ಕರ್ ಅವರು ನಮಗೆ ಮೀಸಲಾತಿ ಅಡಿಯಲ್ಲಿ ಸಮಾಜಕ್ಕೆ ನ್ಯಾಯ ಕೊಟ್ಟಿದ್ದಾರೆ. ನಮ್ಮಿಂದ ಮತದಾನ ಪಡೆದವರು ಉಲ್ಲವರ ಕಡೆ ಹೋಗುತ್ತಿದ್ದಾರೆ. ನಾನು ರೂಲಿಂಗ್ ಪಾರ್ಟಿಯ ಜನವಾದರೂ ಸಂಘಟನೆ, ಅಂಬೇಡ್ಕರವರ ಆಶಯ ಈಡೇರಿಸುವುದು ನನಗೆ ಮುಖ್ಯ ಎನಿಸುತ್ತದೆ. ಹಾಗಾಗಿ ಕೂಡಲೆ ಜಟಿಲವಾದ ಸಮಸ್ಯೆಗಳನ್ನು ಇಲಾಖೆ ತಕ್ಷಣ ಬಗೆ ಹರಿಸಿ ನೊಂದ ಸಮಾಜಕ್ಕೆ ನ್ಯಾಯ ಕೊಡುವಂತೆ ಒತ್ತಾಯ ಮಾಡುತ್ತೇನೆ. ಇದು ಸಾಧ್ಯವಾಗದಿದ್ದರೆ ಮುಂದಿನ ಚುನಾವಣೆಯಲ್ಲಿ ನಾವು ಒಂದು ನಿಣಾಯಕ ಹಂತಕ್ಕೆ ಬರಬೇಕೆಂದರು. ಜೊತೆಗೆ ಜಿಲ್ಲಾ ಮುಖಂಡರ ಜೊತೆ ಸೇರಿ ದಿಟ್ಟ ಹೋರಾಟಕ್ಕೆ ಹೆಜ್ಜೆ ಇಡಬೇಕಾಗಿದೆ. ಬೇಡಿಕೆಯನ್ನು ಈಡೇರಿಸುವ ಕುರಿತು ಸರಕಾರವನ್ನು ಒತ್ತಾಯಿಸುತ್ತೇನೆ. ಬೇಡಿಕೆ ಈಡೇರದಿದ್ದಲ್ಲಿ ಮುತ್ತಿಗೆ ಅನಿವಾರ್ಯ ಎಂದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್ ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಈ ಸಂದರ್ಭ ಗಿರಿಧರ ನಾಯ್ಕ ಅವರು ಮೂಲಭೂತ ಸೌಕರ್ಯ ಒದಗಿಸುವಂತೆ ವಿವರಣೆ ನೀಡಿದರು. ಜೊತೆಗೆ ನಮ್ಮ 13 ಮಂದಿ ಮೇಲೆ ಕೋರ್ಟ್ ಕೇಸ್ ಹಾಕಿದ್ದಾರೆ. ಈ ಕುರಿತು ಕೇಸ್ ಹಿಂಪಡೆಯುವಂತೆ ಮನವಿ ಮಾಡಿದರು. ಮಾಹಿತಿ ಪಡೆದು ಕೊಂಡ ಸಹಾಯಕ ಕಮೀಷನರ್ ಅವರು ಈ ಕುರಿತು ಪರಿಶೀಲಿಸುತ್ತೇನೆ. ಕಾಲಾವಕಾಶ ಬೇಕಾಗುತ್ತದೆ ಎಂದರು. ಇದಾದ ಬಳಿಕ ಸ್ಥಳಕ್ಕೆ ಆಗಮಿಸಿದ ತಾ.ಪಂ ಕರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಹೆಚ್ ಅವರು ಕಾನೂನಿಗೆ ಗೌರವ ಕೊಡಲೆ ಬೇಕು. ರಸ್ತೆ ಕೆಲಸ ಮಾಡಿದು ನನ್ನ ಗಮನಕ್ಕೆ ಬಂದಿದೆ. ಅಲ್ಲಿ ಕಾಲು ದಾರಿ ಇದೆ. ಅವಕಾಶ ಇದ್ದರೆ ಅಭಿವೃದ್ದಿಗೆ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಭರವಸೆ ನೀಡಿದರು.

ಪ್ರತಿಭಟನಾಕಾರನ್ನು ಉದ್ದೇಶಿಸಿ ಗಿರಿಧರ ನಾಯ್ಕ್ ಅವರು ಮಾತನಾಡಿ ಅಧಿಕಾರಿಗಳು ಮನವಿ ಸ್ವೀಕರಿಸಿದ್ದರೆ. ನ್ಯಾಯ ಕೊಡುವ ಭರವಸೆ ನೀಡಿದ್ದಾರೆ. ನಾನು 15 ದಿನದೊಳಗೆ ಅಧಿಕಾರಿಗಳನ್ನು ಭೇಟಿ ಮಾಡಿ ನಮ್ಮ ಬೇಡಿಕೆಯ ಕುರಿತು ವಿಚಾರಿಸುತ್ತೇನೆ. ಮುಂದೆ ಒಂದು ತಿಂಗಳ ಕಾಲಾವಕಾಶ ನೀಡುವ. ಸಹಾಯಕ ಕಮೀಷನರ್ ಅವರು ನಮ್ಮ ಕೆಲಸ ಮಾಡಿಕೊಡದಿದ್ದರೆ ನಾವು ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದು ಗ್ಯಾರೆಂಟಿ. ಇದರ ಜೊತೆಗೆ ಅಲ್ಲಿರುವ 12 ಎಕ್ರೆ ಸರಕಾರಿ ಜಮೀನನ್ನು ಕೂಡಾ ಬಡವರಿಗೆ ಹಂಚುವಂತೆ ಒತ್ತಾಯ ಮಾಡಲಿದ್ದೇವೆ. ಈ ಸಂದರ್ಭ ಕಾಲೋನಿಯವರು ನನ್ನೊಂದಿಗೆ ಇರಬೇಕು. ನಿಮ್ಮ ಆನೆ ಬಲ ಇದ್ದರೆ ನಾನು ಕಂಡಿತಾ ಕೆಲಸ ಮಾಡುತ್ತೇನೆ. ಇದೆ ತಿಂಗಳ 20ಕ್ಕೆ ದಂಡಾಧಿಕಾರಿ ಕೋರ್ಟ್ ಇದೆ. ನಮ್ಮ ಮೇಲೆ ದಾಖಲೆ ಇದ್ದರೆ ಕಂಡಿತಾ ನಮ್ಮ ಮೇಲೆ ಕೇಸ್ ಹಾಕಲಿ, ಜೈಲಿಗೂ ಹಾಕಲಿ. ಯಾವುದೇ ದಾಖಲೆ ಇಲ್ಲದೆ ಸುಮ್ಮನೆ ಕೇಸು ಹಾಕುವುದು ಸರಿಯಲ್ಲ ಎಂದರು.

ವೇದಿಕೆಯಲ್ಲಿ ಬೆಟ್ಟಂಪಾಡಿ ಪಂಚಾಯತ್ ಮಾಜಿ ಅಧ್ಯಕ್ಷೆ ಪವಿತ್ರಾ ದೇರಡ್ಕ,ಇರ್ದೆ ಗ್ರಾಮದ ನಿವಾಸಿ ಐತ್ತಪ್ಪ, ಕೃಷ್ಣಪ್ಪ ನಾಯ್ಕ, ಕೊರಗಪ್ಪ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *