ಬಂಟ್ವಾಳ : ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಸಮಾಜ ಸೇವಾ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುವರ್ಯರ ಜಯಂತಿ ಪ್ರಯುಕ್ತ ಗುರು ಪೂಜೋತ್ಸವ ಹಾಗೂ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೆ.07ರಂದು ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಅವರು, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಅವರು ಯಾವುದೇ ಜಾತಿಗೆ ಸೀಮಿತರಾದವರಲ್ಲ. ಜಾತಿ, ಧರ್ಮದ ಪಿಡುಗನ್ನು ಕಿತ್ತು ಹಾಕಿ ಭಾರತದ ಶ್ರೇಷ್ಠ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಶ್ರೇಷ್ಠ ಸಂತರು. ಅವರ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ಗುರು ಪೂಜೆ ಎಂದರು.
ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯರು ಕಟ್ಟಿದ ಸಂಘವನ್ನು ಬೆಳೆಸಬೇಕು. ಸಂಘದ ಮೂಲಕ ಸಂಕಷ್ಟಕ್ಕೀಡಾದವರಿಗೆ ಸಹಾಯವಾಗಬೇಕು. ಮುಂದಿನ ದಿನಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದರು.

ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಮಾತಾನಾಡಿ , ನಾರಾಯಣ ಗುರುಗಳು ಸಂಘರ್ಷ ರಹಿತವಾಗಿ ಶಾಂತಿಯ ಮೂಲಕ ಸಮಾಜದ ಪಿಡುಗುಗಳ ವಿರುದ್ಧ ನಡೆಸಿದ ಹೋರಾಟ ನಮಗೆ ಆದರ್ಶವಾಗಬೇಕು ಎಂದರು.
ಬಂಟ್ವಾಳ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಬೂಡ ಅಧ್ಯಕ್ಷ ಬೇಬಿ ಕುಂದರ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಸದಾನಂದ ಪೂಜಾರಿ ಪೂನಾ ಮತ್ತು ವೆನ್‌ಲಾಕ್ ಆಸ್ಪತ್ರೆಯ ತಜ್ಞ ವೈದ್ಯ ಡಾ|ಸದಾನಂದ ಪೂಜಾರಿ ಅವರಿಗೆ ಸಾಧನಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸ್ಥಳದಾನಿ ಸುರೇಶ್ ಅಂಚನ್ ಅವರಿಗೆ ಸನ್ಮಾನ ಮತ್ತು ಗರಿಷ್ಟ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಕ್ಷರ ಪುರಸ್ಕಾರ ಮತ್ತು ಅನಾರೋಗ್ಯ ಪೀಡಿತರಿಗೆ ಆರೋಗ್ಯ ನಿಧಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪುರೋಹಿತ ಸೀತಾರಾಮ ಶಾಂತಿ, ಸಂಘದ ಉಪಾಧ್ಯಕ್ಷರಾದ ಸತೀಶ್ ಪೂಜಾರಿ ಹಲಕ್ಕೆ, ನಿತ್ಯಾನಂದ ಪೂಜಾರಿ ಕೆಂತಲೆ, ಸಂಘದ ಪದಾಧಿಕಾರಿಗಳಾದ ಯೋಗೀಶ್ ಪೂಜಾರಿ ಕೇರ್ನಡೆ, ಸಂತೋಷ್ ಪೂಜಾರಿ ಬೆಟ್ಟುಕೋಡಿ, ರಮೇಶ್ ಪೂಜಾರಿ ಮಜಲು, ಸಂಘದ ಮತ್ತು ಮಹಿಳಾ ಸಮಿತಿ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ರತ್ನಾಕರ ಪೂಜಾರಿ ಮದಂಗೋಡಿ ಸ್ವಾಗತಿಸಿ, ಮಹಿಳಾ ಸಮಿತಿ ಅಧ್ಯಕ್ಷೆ ಅನುರಾಧ ಜಾನುಗುರಿ ವಂದಿಸಿದರು. ಸುಭಾಸ್ ಬಂಗೇರ ನಿರೂಪಿಸಿದರು.



