ಮೂಡಬಿದಿರೆ: ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಹೋಲಿ ಕ್ರಾಸ್ ಚರ್ಚ್ ತಾಕೊಡೆ ಇಲ್ಲಿನ ಕಿಡ್ನಿ ರೋಗಿಯೊಬ್ಬರಿಗೆ ಆರ್ಥಿಕ ನೆರವು ನೀಡುವಂತೆ ಕೋರಿ ಚರ್ಚ್ ಧರ್ಮಗುರುಗಳು ನೀಡಿದ್ದ ಪತ್ರವನ್ನು ದುರುಪಯೋಗ ಪಡಿಸಿಕೊಂಡು ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೋಲಿ ಕ್ರಾಸ್ ಚರ್ಚ್ ತಾಕೊಡೆ ಇದರ ಚರ್ಚ್ ಆರ್ಥಿಕ ಸಮಿತಿ ಸದಸ್ಯೆ ಐವಿ ಕ್ರಾಸ್ತಾ ಎಂಬವರು ದೂರು ನೀಡಿದ್ದು ಆರೋಪಿ ಅದೇ ಚರ್ಚ್ ನ ವಿನೋದ್ ವಾಲ್ಟರ್ ಪಿಂಟೋ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಕೊಡೆ ಚರ್ಚ್ ಧರ್ಮ ಗುರುಗಳಾದ ವಂದನೀಯ ಫಾದರ್ ರೋಹನ್ ಲೋಬೊರವರು ಚರ್ಚ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸುರ್ಲಾಯ್ ಎಂಬಲ್ಲಿನ ಹೆನ್ರಿ ನೊರೋನ್ಹಾ ಇವರ ಮಗನಾದ ಮರ್ವಿನ್ ನೊರೊನ್ಹಾ ಎಂಬವರು ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ತಂದೆಯ ಕಿಡ್ನಿಯನ್ನು ವರ್ಗಾಯಿಸಲು ಆರ್ಥಿಕ ನೆರವನ್ನು ಕೋರಿ ಮರ್ವಿನ್ ನೊರೊನ್ಹಾ ಇವರ ಬ್ಯಾಂಕ್ ಖಾತೆ ಸಹಿತ ಒಂದು ಮನವಿ ಪತ್ರವನ್ನು ಚರ್ಚ್ ನ ವಾಟ್ಸಾಪ್ ಗ್ರೂಪ್ ನಲ್ಲಿ ಹಾಕಿದ್ದು, ಈ ಮನವಿ ಪತ್ರವನ್ನು ಫೋಕಸ್ ಎಂಬ ವಾಟ್ಸಾಪ್ ಗ್ರೂಪಿನ ಅಡ್ಮಿನ್ ಆದ ವಿನೋದ್ ವಾಲ್ಮರ್ ಪಿಂಟೊ ಎಂಬಾತನು ದುರುಪಯೋಗಪಡಿಸಿಕೊಂಡು ಮನವಿ ಪತ್ರದಲ್ಲಿದ್ದ ಖಾತೆಯ ವಿವರಗಳನ್ನು ಅಳಿಸಿ ಹಾಕಿ State Bank of India ಮೂಡಬಿದ್ರೆ ಶಾಖೆಯ ವಿನೋದ್ ವಾಲ್ಟರ್ ಪಿಂಟೋ ಹೆಸರಿನಲ್ಲಿರುವ ಬ್ಯಾಂಕ್ ಉಳಿತಾಯ ಖಾತೆ ನಂಬರ್ : 64135690981 ಇದರ ವಿವರಗಳನ್ನು ಮುದ್ರಿಸಿ ಫೋಕಸ್ ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಹಾಕಿ ಹಣ ಸಂಗ್ರಹ ಮಾಡಿಕೊಂಡು ವಂಚನೆ ಮಾಡಿದ್ದು, ಸ್ವಲ್ಪ ದಿನಗಳ ನಂತರ ಚರ್ಚ್ ಧರ್ಮಗುರುಗಳ ಗಮನಕ್ಕೆ ಬಂದ ಹಿನ್ನಲೆ ತಕ್ಷಣ ಅವರು ವಾಟ್ಸಾಪ್ ಗ್ರೂಪ್ ನಲ್ಲಿ ಸಂದೇಶ ಹಾಕಿ ಭಕ್ತಾದಿಗಳಿಗೆ ವಂಚನೆಯ ಬಗ್ಗೆ ತಿಳಿಸಿರುತ್ತಾರೆ.

ಈ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



