ಮಂಗಳೂರು: ಭಾರತದ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಡಾ. ವಿಕ್ರಮ್ ಸಾರಾಭಾಯಿ ಅವರ ಜಯಂತಿ ಅಂಗವಾಗಿ ಶಾಲಾ ಮಕ್ಕಳಿಗಾಗಿ ವೈಜ್ಞಾನಿಕ ಮಾದರಿ ತಯಾರಿ ಸ್ಪರ್ಧೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮಂಗಳೂರು ಮಹಾನಗರ ಹಾಗೂ ಕೆನರಾ–ವಿಕಾಸ್ ವಿದ್ಯಾಸಂಸ್ಥೆ ಮಂಗಳೂರು ಇದರ ಆಶ್ರಯದಲ್ಲಿ ನಡೆಯಿತು.

ವಿಕ್ರಮ 2024 ಶೀರ್ಷಿಕೆಯಡಿ ನಡೆದ ಈ ಸ್ಪರ್ಧೆಯಲ್ಲಿ ಮಂಗಳೂರು ಹಾಗೂ ಸುತ್ತಮುತ್ತಲಿನ ವಿದ್ಯಾಸಂಸ್ಥೆಗಳ ವಿದ್ಯಾರ್ಥಿ ತಂಡಗಳು ತಮ್ಮ ವೈಜ್ಞಾನಿಕ ಪ್ರತಿಭೆಯನ್ನು ಪ್ರದರ್ಶಿಸಿದರು. ವಿವಿಧ ವಿಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆವಿಷ್ಕಾರಾತ್ಮಕ ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು. ಉದ್ಘಾಟನಾ ಸಮಾರಂಭದಲ್ಲಿ ಮೈಟ್ ಮಂಗಳೂರು ‘Career Fulfilment Officer’ ಭರತ್ ರಾಜ್ ಬಂಟ್ವಾಳ್, ಎಬಿವಿಪಿ ಮಂಗಳೂರು ವಿಭಾಗ ಪ್ರಮುಖ ಕೇಶವ ಬಂಗೇರ, ಎಬಿವಿಪಿ ಮಂಗಳೂರು ಜಿಲ್ಲಾ ಪ್ರಮುಖ ಭಾರತಿ ಪ್ರಭು ಹಾಗೂ ಮಂಗಳೂರು ನಗರ ಕಾರ್ಯದರ್ಶಿ ಮೋನೀಶ್ ತುಮಿನಾಡು ಉಪಸ್ಥಿತರಿದ್ದರು.

ಈ ವೇಳೆ ಕೇಶವ ಬಂಗೇರರು, “ಡಾ. ವಿಕ್ರಮ್ ಸಾರಾಭಾಯಿ ಅವರ ಕೊಡುಗೆ ಭಾರತದ ವಿಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರಕ್ಕೆ ಅಪಾರ. ಅವರ ದೃಷ್ಟಿಕೋನವೇ ಇಸ್ರೋ ಸ್ಥಾಪನೆಗೆ ಹಾಗೂ ಬಾಹ್ಯಾಕಾಶ ಸಂಶೋಧನೆಗೆ ಭದ್ರ ಅಡಿಪಾಯವಾಯಿತು” ಎಂದರು.

ಪ್ರಥಮ ಬಹುಮಾನವನ್ನು ಶ್ರೀರಾಮ ಹೈಸ್ಕೂಲ್ ಕಲ್ಲಡ್ಕ ಹಾಗೂ ದ್ವಿತೀಯ ಬಹುಮಾನವನ್ನು ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆ , ತೃತೀಯ ಬಹುಮಾನವನ್ನು ಕೇನರಾ CBSE, ಮಂಗಳೂರು ಇವರು ಗಳಿಸಿದರು.



