ಪುತ್ತೂರು ವಿವೇಕಾನಂದ ಶಿಶುಮಂದಿರ ಮತ್ತು ಸಾರ್ವಜನಿಕ ಶ್ರೀಕೃಷ್ಣಜನ್ಮಾಷ್ಟಮಿ ಸಮಿತಿಯ ಆಶ್ರಯದಲ್ಲಿ, ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ 27ನೇ ವರ್ಷದ ಶ್ರೀಕೃಷ್ಣ ಲೋಕ ಕಾರ್ಯಕ್ರಮ

ಪುತ್ತೂರು: ಪುತ್ತೂರು ವಿವೇಕಾನಂದ ಶಿಶುಮಂದಿರ ಮತ್ತು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಆಶ್ರಯದಲ್ಲಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ 27ನೇ ವರ್ಷದ ಶ್ರೀಕೃಷ್ಣ ಲೋಕ ಕಾರ್ಯಕ್ರಮ ಆ.16ರಂದು ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಮೋಹನ್ ಕೆ. ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಗೆ ವಿವೇಕಾನಂದ ಶಿಶು ಮಂದಿರದಲ್ಲಿ ಬಾಲಕೃಷ್ಣನ ತೊಟ್ಟಿಲ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. 9.30ಕ್ಕೆ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಪರ್ಲಡ್ಕ ರಸ್ತೆಯಿಂದ ಮುಖ್ಯ ರಸ್ತೆಗೆ ಬಂದು ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ನಿರ್ಮಿಸಿರುವ ಸಭಾಭವನಕ್ಕೆ ಶೋಭಾಯಾತ್ರೆ ಆಗಮಿಸಲಿದೆ. ಸಾವಿರಾರು ಮಕ್ಕಳು ಶ್ರೀಕೃಷ್ಣನ ವೇಷ ಧರಿಸಿ ಮೆರವಣಿಗೆಯಲ್ಲಿ ಆಗಮಿಸಲಿದ್ದು, ಹೆತ್ತವರು ಕೂಡ ಸಾಂಪ್ರದಾಯಿಕ ಉಡುಗೆಗಳೊಂದಿಗೆ ಭಾಗವಹಿಸಲಿದ್ದಾರೆ ಎಂದರು.

ಇದಾದ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಅಗಲ್ಪಾಡಿಯ ಅಧ್ಯಾಪಕ ಹರಿನಾರಾಯಣ ಶಿರಂತಡ್ಕ ವಹಿಸಲಿದ್ದಾರೆ. ಸಮಾಜ ಸೇವಕ ಅಗಿಲೆ ಯೋಗೀಶ್ ಹಾಸನ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ವಿವೇಕಾನಂದ ಸ್ನಾತಕೋತ್ತರ ಅದ್ಯಯನ ಕೇಂದ್ರದ ಡೀನ್ ಡಾ. ವಿಜಯ ಸರಸ್ವತಿ ಬಿ. ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದವರು ವಿವರಿಸಿದರು.

ವಿವೇಕಾನಂದ ಶಿಶುಮಂದಿರದ ಮಕ್ಕಳು,ವಿವೇಕಾನಂದ ವಿದ್ಯಾವರ್ಧಕ ಸಂಘದ ನಾನಾ ಸಂಸ್ಥೆಗಳಲ್ಲಿ ಕಲಿಯತ್ತಿರುವ ಪುಟ್ಟ ಮಕ್ಕಳು ಮತ್ತು ತಾಲೂಕಿನ ನಾನಾ ಅಂಗನವಾಡಿಗಳಲ್ಲಿ ಕಲಿಯುವ ಮಕ್ಕಳು ಸೇರಿದಂತೆ ನಾನಾ ಶಾಲೆಗಳ ಮಕ್ಕಳು ಕೂಡ ಶ್ರೀಕೃಷ್ಣನ ವೇಷ ಧರಿಸಿ ಶೋಭಾಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಭಾಗವಹಿಸುವವರು ಶಿಶು ಮಂದಿರದಲ್ಲಿ ಮುಂಚಿತವಾಗಿ ಹೆಸರು ನೋಂದಾಯಿಸಬೇಕು. ವೇಷ ಧರಿಸುವ ಮಕ್ಕಳ ಪಾಲಕರು ಕೂಡ ಸಾಂಪ್ರದಾಯಿಕ ಉಡುಪು ಧರಿಸಬೇಕು. ಶೋಭಾ ಯಾತ್ರೆಯಲ್ಲಿ ಭಾಗವಹಿಸುವ ಎಲ್ಲ ಶ್ರೀಕೃಷ್ಣ ವೇಷಧಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಗೌರವಾಧ್ಯಕ್ಷೆ ರಾಜೀ ಬಲರಾಮ ಆಚಾರ್ಯ, ಉಪಾಧ್ಯಕ್ಷೆ ಮಾಲಿನಿ ಕಷ್ಯಪ್, ಸದಸ್ಯ ಉಮೇಶ್ ಕುಮಾರ್, ವಿವೇಕಾನಂದ ಶಿಶು ಮಂದಿರದ ಸಂಚಾಲಕ ಅಕ್ಷಯ ಕುಮಾರ್ ಬಿ.ಎಸ್. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *