Breaking
25 Nov 2026, Wed

ಬಾವಿಗೆ ಬಿದ್ದ ಹೋರಿಯ ರಕ್ಷಣೆ: ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆಗೆ ಮೆಚ್ಚುಗೆ

ಬಂಟ್ವಾಳ: ತಾಲೂಕಿನ ಪೊನ್ನೋಡಿ, ಬಿ.ಸಿ.ರೋಡ್‌ನ ಕರಾವಳಿ ಸರ್ವೀಸ್ ಸ್ಟೇಷನ್ ಬಳಿ ಹೋರಿಯೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದ ಘಟನೆ ನಡೆದಿದೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬಂಟ್ವಾಳ ಅಗ್ನಿಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಹಗ್ಗ ಮತ್ತು ಸುರಕ್ಷತಾ ಸಾಧನಗಳ ನೆರವಿನಿಂದ ಕಾರ್ಯಾಚರಣೆ ನಡೆಸಿ, ಬಾವಿಗೆ ಬಿದ್ದ ಹೋರಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾದರು.

ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆ, ಧೈರ್ಯ ಹಾಗೂ ತಂಡದ ಸಮನ್ವಯದಿಂದ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕಾರ್ಯಾಚರಣೆಯಲ್ಲಿ ಅಧಿಕಾರಿ ಹರೀಶ್ ಕೆ.ಟಿ., ಪ್ರಮುಖ ಅಗ್ನಿಶಾಮಕ ರೋಹಿತ್, ಅಗ್ನಿಶಾಮಕ ಚಾಲಕ ಕಿರಣ್ ಕುಮಾರ್ ಹಾಗೂ ಫೈರ್ ಫೈಟರ್‌ಗಳಾದ ಸತಿ ಸಂಗಡಿ, ವಿಜಯಕುಮಾರ್ ಷ. ಬೂದಗಟ್ಟಿ ಮತ್ತು ಧರ್ಮ ಎಂ. ಭಾಗವಹಿಸಿದ್ದರು.

ಇದೇ ವೇಳೆ ಬಂಟ್ವಾಳ ಪಶು ಸಂಜೀವಿನಿ ತುರ್ತು ಸಹಾಯವಾಣಿ 1962ರ ಆಂಬ್ಯುಲೆನ್ಸ್‌ನ ಪಶುವೈದ್ಯಾಧಿಕಾರಿ ಡಾ. ಸುನೀಲ್ ಚವಾನ್ ಹಾಗೂ ಚಾಲಕ ಜಯಗಣೇಶ್ ಸ್ಥಳಕ್ಕೆ ಆಗಮಿಸಿ ಹೋರಿಯ ಆರೋಗ್ಯ ಪರಿಶೀಲಿಸಿದರು. ಹೋರಿಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ಅವರು ಖಚಿತಪಡಿಸಿದರು.

Leave a Reply

Your email address will not be published. Required fields are marked *