ಕಲ್ಲಡ್ಕ: ಸ್ವಚ್ಛತಾ ಅಭಿಯಾನವು ಕೇವಲ ಕಸವನ್ನು ತೆಗೆದುಹಾಕುವ ಕಾರ್ಯಕ್ರಮವಲ್ಲ. ಅದು ಜನರ ಮನೋಭಾವವನ್ನು ಬದಲಾಯಿಸುವ, ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಹಾಗೂ ಮುಂದಿನ ಪೀಳಿಗೆಗೆ ಸ್ವಚ್ಛ ಮತ್ತು ಸುಂದರ ಪರಿಸರವನ್ನು ಕೊಡುಗೆಯಾಗಿ ನೀಡುವ ಮಹತ್ವದ ಸಾಮಾಜಿಕ ಚಳವಳಿಯಾಗಿದೆ. ಪ್ರತಿಯೊಬ್ಬರೂ ಸ್ವಚ್ಛತೆಯನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಾಗ ಮಾತ್ರ ಸ್ವಚ್ಛ, ಸುಂದರ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಹಸಿರು ದಳ ಮಂಗಳೂರು ಇದರ ಮೇಲ್ವಿಚಾರಕ ಶಾಂತಪ್ಪ ಹೇಳಿದರು.

ನವೆಂಬರ್ 21ರಂದು ಶನಿವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ, ವೀರಕಂಬದಲ್ಲಿ ಗ್ರಾಮ ಪಂಚಾಯತ್ ವೀರಕಂಬ, ಹಸಿರು ದಳ ಮಂಗಳೂರು, ಸ್ನೇಹ ಸಂಜೀವಿನಿ ಒಕ್ಕೂಟ ವೀರಕಂಬ, ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಇಕೋ ಕ್ಲಬ್‌ಗಳ ಜಂಟಿ ಆಶ್ರಯದಲ್ಲಿ ನಡೆದ ಸ್ವಚ್ಛತಾ ಅಭಿಯಾನ ಮತ್ತು ಸ್ವಚ್ಛತೆ ಹಾಗೂ ಕಸ ನಿರ್ವಹಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪರಿಸರ ಸ್ವಚ್ಛತಾ ಅಭಿಯಾನ
ಮಜಿ ಶಾಲಾ ವಠಾರದಿಂದ ವೀರಕಂಬ ಗ್ರಾಮ ಪಂಚಾಯತ್ ಕಚೇರಿವರೆಗೆ ಪರಿಸರ ಜಾಥಾ ನಡೆಸಲಾಯಿತು. ಜಾಥಾದ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿದ್ದ ಪ್ಲಾಸ್ಟಿಕ್ ಕಸ ಹಾಗೂ ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸಲಾಯಿತು. ಅಲ್ಲದೆ, ಪರಿಸರದಲ್ಲಿದ್ದ ನಾಲ್ಕು ಪ್ರಯಾಣಿಕರ ತಂಗುದಾಣಗಳನ್ನು ಸ್ವಚ್ಛಗೊಳಿಸಲಾಯಿತು.
ಸ್ಥಳೀಯ ಅಂಗಡಿಗಳಿಗೆ ಭೇಟಿ ನೀಡಿ ಸ್ವಚ್ಛತೆಯ ಮಹತ್ವ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಕುರಿತು ವ್ಯಾಪಾರಸ್ಥರಿಗೆ ಅರಿವು ಮೂಡಿಸಲಾಯಿತು.

ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ
ನಂತರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ವಚ್ಛ ಪರಿಸರದ ಮಹತ್ವದ ಕುರಿತು ಮಾಹಿತಿ ನೀಡಲಾಯಿತು. ಮಾನವನ ಸ್ವಾರ್ಥ ಹಾಗೂ ಪರಿಸರದ ಮೇಲಿನ ನಿರ್ಲಕ್ಷ್ಯದಿಂದ ಸಮಾಜಕ್ಕೆ ಮತ್ತು ಪ್ರಕೃತಿಗೆ ಉಂಟಾಗುವ ಹಾನಿಯ ಕುರಿತು ತಿಳಿಸುವ ವಿಡಿಯೋಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು.

ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಗಾಯತ್ರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಬು ಕುಮಾರ್ ಶರ್ಮ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಅಬ್ದುಲ್ ಕರೀಂ, ಸ್ನೇಹ ಸಂಜೀವಿನಿ ಒಕ್ಕೂಟ (ರಿ.) ವೀರಕಂಬದ ಅಧ್ಯಕ್ಷೆ ಕುಸುಮ ಶೆಟ್ಟಿ, ಒಕ್ಕೂಟದ ಪದಾಧಿಕಾರಿ ದೀಪಾ ವೈ., ಎಂಬಿಕೆ ಮಲ್ಲಿಕಾ ಎಸ್. ಶೆಟ್ಟಿ, ಪಶು ಸಖಿ ಪ್ರಚೀನ, ಕೃಷಿ ಸಖಿ ನಮಿತ, ಎಲ್‌ಸಿಆರ್‌ಪಿ ರೂಪಶ್ರೀ, ಎಫ್‌ಎಲ್‌ಸಿಆರ್‌ಪಿ ಪೂಜಾ, ಹಸಿರು ದಳ ಮಂಗಳೂರು ಮೇಲ್ವಿಚಾರಕಿ ಭವ್ಯಶ್ರೀ, ಹಿರಿಯ ವಿದ್ಯಾರ್ಥಿ ಸಂಘದ ಸಂಘಟನಾ ಕಾರ್ಯದರ್ಶಿ ಚಿನ್ನಾ ಮೈರಾ ಉಪಸ್ಥಿತರಿದ್ದರು.
ಶಾಲಾ ಸ್ಕೌಟ್ ಮಾಸ್ಟರ್ ಹಾಗೂ ಶಿಕ್ಷಕಿ ಸಂಗೀತ ಶರ್ಮ, ಇಕೋ ಕ್ಲಬ್ ಮೇಲ್ವಿಚಾರಕಿ ಮತ್ತು ಗೈಡ್ ಕ್ಯಾಪ್ಟನ್ ಸಂಪ್ರಿಯಾ, ಶಿಕ್ಷಕ ತೌಸೀಫ್ ಅಹ್ಮದ್, ಶಿಕ್ಷಕಿ ಮಮತಾ, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು. ಶಾಲಾ ಶಿಕ್ಷಕರು ಕಾರ್ಯಕ್ರಮಕ್ಕೆ ಸಹಕರಿಸಿದರು.





