ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಸಾರ್ವಜನಿಕ ಶ್ರೀ ಶಾರದೋತ್ಸವ ಆಚರಣಾ ಸಮಿತಿ ವತಿಯಿಂದ ಎಂಟನೇ ವರ್ಷದ ‘ಸಿದ್ಧಕಟ್ಟೆ ದಸರಾ ಉತ್ಸವ’ ಅ.17 ಮತ್ತು 18ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಅ.17ರಂದು ಬೆಳಿಗ್ಗೆ 8.30ಕ್ಕೆ ಮೆರವಣಿಗೆಯ ಮೂಲಕ ಶಾರದಾ ಮೂರ್ತಿಯನ್ನು ತರಲಾಗುವುದು. ಬೆಳಿಗ್ಗೆ 9.15ಕ್ಕೆ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೀಪ ಪ್ರಜ್ವಲನೆ ನಡೆಯಲಿದೆ. ಬೆಳಿಗ್ಗೆ 11ಕ್ಕೆ ಮಹಿಳಾ ಸಭೆ, ಮಧ್ಯಾಹ್ನ 12ಕ್ಕೆ ವಿಶೇಷ ಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ. ಮಧ್ಯಾಹ್ನ 1ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 7.30ಕ್ಕೆ ‘ಚಂದ್ರಾವತಿ’ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಅ.18ರಂದು ಬೆಳಿಗ್ಗೆ 8ರಿಂದ ಭಜನೆ, 9.30ಕ್ಕೆ ಅಕ್ಷರಾಭ್ಯಾಸ ಹಾಗೂ 10.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 11ಕ್ಕೆ ಧಾರ್ಮಿಕ ಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಸಂಜೆ 4ಕ್ಕೆ ಶೋಭಾಯಾತ್ರೆ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.




